ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಸಚಿವ ಎಂ.ಬಿ. ಪಾಟೀಲ ಸಹಾಯ ಹಸ್ತ
ಸಂಜೆವಾಣಿ ವಾರ್ತೆ,
ವಿಜಯಪುರ,ಆ. ೧೫: ಬ್ಯಾಚುಲರ್ ಆಫ್ ಎಂಜಿನಿಯರಿAಗ್(ಬಿ.ಇ) ಪದವಿಗಾಗಿ ಡಿಪ್ಲೋಮಾ ವಿಭಾಗದಿಂದ ನಡೆದ ಸಿಇಟಿ (ಲ್ಯಾಟರಲ್ ಎಂಟ್ರಿ)ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಸಹಾಯ ಧನ ನೀಡುವ ಮೂಲಕ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.
ಬುಧವಾರ ಸಚಿವರು ವಿದ್ಯಾರ್ಥಿಯ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ರೂ. ೧.೨೦ ಲಕ್ಷ ಮೊತ್ತದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ವಿದ್ಯಾರ್ಥಿಯ ತಾಯಿ ರಮಾ ಚವ್ಹಾಣ ಉಪಸ್ಥಿತರಿದ್ದರು.
ವಿಜಯಪುರ ನಗರದ ಸ್ಪಿನ್ನಿಂಗ್ ಮಿಲ್ ತಾಂಡಾದ ಮತ್ತು ಸದÀ್ಯಕ್ಕೆ ಸಾಯಿ ಪಾರ್ಕಿನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿ ಕಿರಣ ಶಂಕರ ಚವ್ಹಾಣ ಡಿಪ್ಲೋಮಾ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಬಿ. ಇಗಾಗಿ ಬೆಂಗಳೂರಿನ ಆರ್. ವಿ. ಎಂಜಿನಿಯರಿAಗ್ ಕಾಲೇಜಿನಲ್ಲಿ ಸರಕಾರಿ ಕೋಟಾದಡಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಯ ತಂದೆ ಶಂಕರ ಮತ್ತು ರಮಾ ಚವ್ಹಾಣ ದಂಪತಿ ಬಡ ಕುಟುಂಬಕ್ಕೆ ಸೇರಿದ್ದಾರೆ. ಬಿ.ಇ ಗೆ ಸೀಟು ಸಿಕ್ಕರೂ ಪ್ರವೇಶ ಪಡೆಯಲು ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗೆ ಸಚಿವ ಎಂ. ಬಿ. ಪಾಟೀಲ ಅವರು ಬುಧವಾರ ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ಚೆಕ್ ವಿತರಿಸಿದರು. ಅಲ್ಲದೇ, ಈ ವಿದ್ಯಾರ್ಥಿ ಬಿ. ಇ ಪದವಿ ಅಧ್ಯಯನಕ್ಕೆ ಮೂರು ವರ್ಷಗಳ ಶಿಕ್ಷಣಕ್ಕೆ ಅಗತ್ಯವಾದ ವೆಚ್ಚವನ್ನೂ ಭರಿಸಲಿದ್ದಾರೆ.
ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿದ ಸಚಿವರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು ಮತ್ತು ಜಿಲ್ಲೆಗೆ ಕೀರ್ತಿ ತರಬೇಕು. ಮುಂದಿನ ವೃತ್ತಿಪರ ಶಿಕ್ಷಣ ಇನ್ನೂ ಚೆನ್ನಾಗಿ ಸಾಗಲಿ ಎಂದು ಶುಭ ಕೋರಿದರು.
ಸಚಿವರ ನೆರವಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ ಕಿರಣ ಚವ್ಹಾಣ, ವಿಜಯಪುರ ನಗರದಲ್ಲಿರುವ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಡಿಪ್ಲೋಮಾ ಓದಿದ್ದೇನೆ. ಬಿ.ಇ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರೂ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರವೇಶ ಪಡೆಯಲು ಸಂಕಷ್ಟ ಎದುರಿಸುತ್ತಿದ್ದೆ. ತಂದೆ ಶಂಕರ ಮನೆಯಲ್ಲಿಯೇ ಇರುತ್ತಾರೆ. ತಾಯಿ ರನಾ ಟೇಲರಿಂಗ್ ಕೆಲಸ ಮಾಡಿ ನನ್ನನ್ನು ಮತ್ತು ನಮ್ಮ ಅಣ್ಣ ರಾಹುಲ್‌ನನ್ನು ಓದಿಸುತ್ತಿದ್ದಾರೆ. ನನಗೆ ಸಚಿವರು ಸಹಾಯ ಮಾಡುವ ಆಪದ್ಬಾಂಧವರಾಗಿದ್ದಾರೆ. ಅವರಿಗೆ ಸದಾ ಋಣಿಯಾಗಿರುತ್ತೇನೆ. ಉತ್ತಮವಾಗಿ ಓದಿ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ತಾಯಿ ರಮಾ ಶಂಕರ ಚವ್ಹಾಣ ಮಾತನಾಡಿ, ಮಗನ ಭವಿಷ್ಯದ ಶಿಕ್ಷಣದ ಬಗ್ಗೆ ಚಿಂತೆಯಲ್ಲಿದ್ದ ನಮ್ಮ ಕುಟುಂಬಕ್ಕೆ ಎಂ. ಬಿ. ಪಾಟೀಲ ಸಾಹೇಬರು ನೆರವಾಗುವ ಮೂಲಕ ನಮ್ಮ ಆತಂಕ ದೂರ ಮಾಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.