ಮೀಸಲಾತಿ ವರ್ಗೀಕರಣ ಶೀಘ್ರ ಅನುಷ್ಠಾನಗೊಳಿಸಲು ಆಗ್ರಹ
ಕಲಬುರಗಿ,ಆ.14-ಸುಪ್ರೀಂಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರ ಮೀಸಲಾತಿ ವರ್ಗೀಕರಣವನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿ ಸತ್ಯಾಗ್ರಹದ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ರಾಜ್ಯದಲ್ಲಿ ಆರಂಭಿಸಿರುವ ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿ ಸದಾಶಿವ ಆಯೋಗದ ವರದಿ ಅನ್ವಯದಂತೆ ಜಾರಿಗೊಳಿಸಬೇಕು, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಅನುದಾನವನ್ನು ಬೇರೆ ಇಲಾಖೆಗೆ ಬಳಸುವುದನ್ನು ತಡೆ ಹಿಡಿದು ಶೋಷಿತರ ಕಲ್ಯಾಣಕ್ಕಾಗಿ ಬಳಸಬೇಕು, ಆದಿ ಜಾಂಭವ ಅಭಿವೃದ್ಧಿ ನಿಗಮ ಹಾಗೂ ಡಾ.ಬಾಬು ಜಗಜೀವನರಾಮ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಸರ್ಕಾರದಲ್ಲಿ ಮಾದಿಗ ಜನಾಂಗಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಮಿತಿ ರಾಜ್ಯ ಉಪಾಧ್ಯಕ್ಷ ಬಸವರಾಜ ಮೇತ್ರಿ, ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಸಗರಕರ, ಶಿವರಾಜ ಗೊಬ್ಬೂರ, ಮಲ್ಲಪ್ಪ ಚಿಗನೂರ, ದೇವಿಂದ್ರ ಹಾದಿಮನಿ, ಶಿವರಾಜ ಜಿನಕೇರಿ, ಮಲ್ಲೇಶಿ ಸೈದಾಪೂರ, ಮಲ್ಲಪ್ಪ ಮಾದರ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.