ಯುವ ನ್ಯಾಯವಾದಿ ಕೊಲೆ ಪ್ರಕರಣ: ಐವರ ಬಂಧನ
ವಿಜಯಪುರ,ಆ.14: ಯುವ ನ್ಯಾಯವಾದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ನ್ಯಾಯವಾದಿ ರವಿ ಮೇಲಿನಕೇರಿ ಅವರಿಗೆ ಆ.8ರಂದು ಇನ್ನೋವಾ ಕಾರ್ ಡಿಕ್ಕಿ ಹೊಡೆದು ನ್ಯಾಯವಾದಿಯನ್ನು ಬಹು ದೂರದವರೆಗೆ ಎಳೆದಾಡಿಕೊಂಡು ಹೋಗಿತ್ತು. ಅದು ಮೊದಲು ಅಪಘಾತ ಎಂದು ಭಾವಿಸಲಾಗಿತ್ತು. ವಿಚಾರಣೆ ಬಳಿಕ ಇದು ಅಪಘಾತವಲ್ಲ. ಕೊಲೆ ಎಂದು ದೃಢಪಟ್ಟಿತು. ಹಾಗಾಗಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದ ಪ್ರಮುಖ ಆರೋಪಿ ತುಳಸಿರಾಮ ಹರಿಜನ ಹಾಗೂ ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಬಂಧಿತ ಆರೋಪಿಗಳು ಎಂದು ಅವರು ಮಾಹಿತಿ ನೀಡಿದರು.
ಆ.8 ರಂದು ಕೊಲೆಗೀಡಾಗಿರುವ ನ್ಯಾಯವಾದಿ ರವಿ ಮೇಲಿನಕೇರಿ ಅವರು ನ್ಯಾಯಾಲಯದಿಂದ ತಮ್ಮ ಸ್ಕೂಟಿಯ ಮೇಲೆ ಬಾಗಲಕೋಟೆ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಪಾಲಿಟೆಕ್ನಿಕ್ ಹಾಸ್ಟೇಲ್ ಹತ್ತಿರ ನಂಬರ್ ಪ್ಲೇಟ್ ಇಲ್ಲದ ಇನೋವಾ ಕಾರಿನಲ್ಲಿ ಬಂದು ವಕೀಲ ರವಿ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ, ಪರಿಣಾಮವಾಗಿ ಕೊಲೆಗೀಡಾಗಿರುವ ನ್ಯಾಯವಾದಿ ರವಿ ಕಾರ್ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಆಗ ಆ ದುಷ್ಕರ್ಮಿಗಳು ತಮ್ಮ ಇನೋವಾ ಕಾರ್ ನಿಲ್ಲಿಸದೇ ಗಾಡಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ರವಿಯನ್ನು ಹಾಗೆಯೇ ಎಳೆಯಿಸಿಕೊಂಡು ಮುಂದೆ ಹೋಗಿ ಬಲಕ್ಕೆ ತಿರುಗಿ ಬಿಎಲ್‍ಡಿಇ ಆಯುರ್ವೇದ ಕಾಲೇಜಿನ ಮುಂದೆ ಹಾಯ್ದು ಮನಗೂಳಿ ಅಗಸಿಯಿಂದ ಬಲಕ್ಕೆ ತಿರುಗಿ ಮನಗೂಳಿ ಅಗಸಿ ಕಡೆಗೆ ಹೋಗುವ ರಸ್ತೆಯ ಮೇಲೆ ಹೊರಟಾಗ ಇನೋವಾ ಕಾರ್ ಕೆಳಗೆ ಸಿಕ್ಕಿಕೊಂಡಿದ್ದ ವಕೀಲ ರವಿ ಇವರ ಶವವು ಮನಗೂಳಿ ರಸ್ತೆಯ ಮೇಲೆ ಇರುವ ಸ್ಮಶಾನದ ಹತ್ತಿರ ರಸ್ತೆಯ ಮೇಲೆ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಮೃತ ರವಿ ಈತನ ಸಹೋದರ ಪ್ರಕಾಶ ಮೇಲಿನಕೇರಿ ಕೊಟ್ಟ ದೂರಿನ ಮೇಲೆ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಆದರೆ ಈ ಪ್ರಕರಣದ ತನಿಖಾ ಕಾಲದಲ್ಲಿ ಇದು ರಸ್ತೆ ಅಪಘಾತವಾಗಿರದೇ ಒಂದು ಕೊಲೆ ಪ್ರಕರಣವೆಂದು ಪತ್ತೆ ಹಚ್ಚಿ ಈ ಕೊಲೆಯ ಪ್ರಮುಖ ಸೂತ್ರಧಾರ ತುಳಸಿರಾಮ ಪಂಡಿತ ಹರಿಜನ ಎನ್ನುವವನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಲಾಯಿತು ಎಂದರು.
ವಿಚಾರಣೆ ವೇಳೆ ಆತ ಹೇಳಿದ ವಿವರಣೆಯಂತೆ, ಪ್ರಮುಖ ಆರೋಪಿ ತುಳಸೀರಾಮ ಹಾಗೂ ರವಿಗೂ ಕಳೆದ ನಾಲ್ಕೈದು ತಿಂಗಳುಗಳ ಹಿಂದೆ ಜಗಳವಾಗಿ ರವಿಯು ತನ್ನ ಸಹೋದರರ ಜೊತೆ ಸೇರಿ ತನಗೆ ಹೊಡೆದು ಅವಮಾನ ಪಡಿಸಿದ್ದಲ್ಲದೇ ತನ್ನನ್ನು ಕೊಲೆ ಮಾಡುವುದಾಗಿ ಹೇಳುತ್ತಾ ತಿರುಗಾಡುತ್ತಿದ್ದನು. ಈಗ ಸುಮಾರು 20 ದಿನಗಳ ಹಿಂದೆ ರವಿ ಮೇಲಿನಕೇರಿ ಇವನು ತನ್ನ ಸಹೋದರರ ಜೊತೆ ಸೇರಿ ಅಲೆಕ್ಸ್‍ನನ್ನು ಮನೆಯಿಂದ ಕಿಡ್ನಾಪ್ ಮಾಡಿಕೊಂಡು ಒಯ್ದು ಹೊಡೆದು, ತುಳಸಿರಾಮನನ್ನು ನಿನ್ನನ್ನು ಕೊಲೆ ಮಾಡುತ್ತೇವೆ. ತುಳಸಿರಾಮನಿಗೆ ಹೇಳು ಎಂದು ಧಮಕಿ ಹಾಕಿದ್ದರು, ಆದ್ದರಿಂದ ತಾನು ತನ್ನ ಸ್ನೇಹಿತರ ಜೊತೆಗೆ ಸೇರಿ ಈ ಕೃತ್ಯ ಎಸಗಲಾಗಿದೆ ಎಂದು ವಿಚಾರಣೆ ಕಾಲಕ್ಕೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.