ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯದ ಪಾತ್ರ ಅನನ್ಯ:ಸಂತೋಷ ಬಂಡೆ
ವಿಜಯಪುರ,ಆ.14: ಪುಸ್ತಕದ ಮೌಲ್ಯ ಅರಿಯಲು ಗ್ರಂಥಾಲಯ ಅವಶ್ಯ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು. ಹೆಚ್ಚೆಚ್ಚು ಸದಸ್ಯರನ್ನು ಮಾಡಿ ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ‘ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯದ ಪಾತ್ರ’ಕುರಿತು ಮಾತನಾಡಿದರು.
ಗ್ರಂಥಾಲಯವು ಜ್ಞಾನದ ಕಣಜವಾಗಿದ್ದು, ಓದುಗನಿಗೆ ಜ್ಞಾನವನ್ನು ಉಣಬಡಿಸುವ ಗ್ರಂಥಪಾಲಕರ ಶ್ರಮ ಬಹಳವಿದೆ. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್. ಆರ್. ರಂಗನಾಥನ್ ಪ್ರಮುಖ ಕಾರಣ. ಅವರು ನೀಡಿದ ಗ್ರಂಥಾಲಯದ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ದೇಹಕ್ಕೆ ಅನ್ನ, ನೀರು, ಗಾಳಿ, ಎಷ್ಟು ಮುಖ್ಯವೋ ಹಾಗೆಯೇ ಮಾನವನ ಮತ್ತು ಸಮಾಜದ ವಿಕಾಸಕ್ಕೆ ಪುಸ್ತಕಗಳು ಬಹು ಮುಖ್ಯ. ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಟ್ಟು, ಸುಶಿಕ್ಷಿತ ಸಮಾಜ ನಿರ್ಮಿಸುವಲ್ಲಿ ನಿರ್ಣಾಯಕವಾಗಿವೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಗ್ರಂಥಾಲಯಗಳು ಆಧುನಿಕ ತಂತ್ರಜ್ಞಾನಕ್ಕೆ ಹೊರಳುತ್ತಿರುವುದು ಸಂತಸದ ವಿಷಯ. ಗ್ರಂಥಪಾಲಕರಾದ ನಾವು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ. ಈ ಮೂಲಕ ನಾವು ಅಪ್‍ಡೇಟ್ ಆಗುತ್ತಾ, ಓದುಗರಿಗೂ ಅಗತ್ಯ ಮಾಹಿತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆನಂದ ಗಂಗನಳ್ಳಿ, ವಿಶಾಲ ಬಡಿಗೇರ, ಕಾಶೀನಾಥ ಬಡಿಗೇರ, ಭೀರಪ್ಪ ಗಿರಿಸಾಗರ, ರವಿ ಹಳ್ಳೂರ, ಸಂತೋಷ ವಾಲೀಕಾರ, ಪರಮಾನಂದ ಸಮಗೊಂಡ ಸೇರಿದಂತೆ ಅನೇಕರು ಉಪÀಸ್ಥಿತರಿದ್ದರು.