ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಕಾರ್ಯ
ಔರಾದ : ಆ.14:ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ ಎಂದು ಯೋಜನಾಧಿಕಾರಿ ರಾಘವೇಂದ್ರ ಗೌಡಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ರಕ್ಷಾಳ(ಕೆ) ಮಹಾದೇವ ಮಂದಿರದಲ್ಲಿ ಏರ್ಪಡಿಸಿದ ಧಾರ್ಮಿಕ ಕೇಂದ್ರಗಳ ಸ್ವಚ್ಚತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧಾರ್ಮಿಕ ಕೇಂದ್ರಗಳು ಸ್ವಚ್ಛತೆ ಇದ್ದಲ್ಲಿ ಭಯ-ಭಕ್ತಿ ಮೂಡಲು ಸಾಧ್ಯ. ಯೋಜನೆ ವತಿಯಿಂದ ಈ ವರ್ಷ ರಾಜ್ಯವ್ಯಾಪ್ತಿಯ ದೇವಾಲಯ, ಮಸೀದಿ ಹಾಗೂ ಚರ್ಚಗಳ ಆವರಣಗಳನ್ನು ಸ್ವಚ್ಛ ಮಾಡುವ ಕಾರ್ಯಕ್ರಮವನ್ನು ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಆದೇಶದಂತೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಮದ್ಯ ವ್ಯವಸ್ಥಾಪನ ಸಮಿತಿ ಮತ್ತು ಕರ್ನಾಟಕ ಜನ ಜಾಗ್ರತಿ ವೇದಿಕೆ ಜಿಲ್ಲಾ ಸದಸ್ಯ ಮಲ್ಲಪ್ಪ ಗೌಡಾ ಮಾತನಾಡಿ, ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಮನೆಯಿಂದ ಪ್ರಾರಂಭ ವಾಗಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯಲಿ, ಸ್ವಚ್ಛತೆ ಎಂಬುದು ಸಂಸ್ಕøತಿಯ ಪ್ರತೀಕವಾಗಿದೆ. ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅಂತರಂಗ (ಕೇಂದ್ರ ಒಳಗೆ) ಮತ್ತು ಬಹಿರಂಗ (ಕೇಂದ್ರ ಪರಿಸರ) ಸ್ವಚ್ಛತೆಯನ್ನು ಮಾಡಿ ಪಾವಿತ್ರ್ಯತೆಯನ್ನು ಕಾಪಾಡಲು ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ನೇತೃತ್ವದಲ್ಲಿ ನೂತನ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಅರತಿ ಮೇತ್ರೆ, ಸುವರ್ಣ, ಮಲ್ಲಮ್ಮ, ರಮಾಬಾಯಿ, ಸುಮನಬಾಯಿ, ಸೂರ್ಯಕಲಾ, ಸರಸ್ವತಿ, ಮೀರಾ, ಲತಾಬಾಯಿ , ಕಾರ್ತಿಕ ಸ್ವಾಮಿ ಇತರರಿದ್ದರು. ಆದೇಶಕುಮಾರ ವಂದಿಸಿ ನಿರೂಪಿಸಿದರು.