ಆ.20 ರಂದು ಡಿ.ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆ
ಬೀದರ, ಅ.14: ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರ ಜನ್ಮ ದಿನಾಚರಣೆಯನ್ನು ಆಗಸ್ಟ್ 20 ರಂದು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಿ. ದೇವರಾಜು ಅರಸು ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂದು ಬೆಳಿಗ್ಗೆ ಎಲ್ಲಾ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 9 ಗಂಟೆಗೆ ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 11 ಗಂಟೆಗೆ ಬೀದರ ನಗರದ ಪ್ರತಾಪ ನಗರದಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದ್ದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದರು.
ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ಆಯೋಜನೆ ಕುರಿತು ಆಯಾ ತಾಲ್ಲೂಕಿನ ತಹಶಿಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಮಟ್ಟದ ವೇದಿಕೆ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಕಳೆದ ವರ್ಷ ಆಭ್ಯಾಸ ಮಾಡಿ 10ನೇ ತರಗತಿ, ಪಿ.ಯು.ಸಿ ಮತ್ತು ಪದವಿ ಸ್ನಾತಕೋತ್ತರ ಪದವಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಅಂದು ಸಂಜೆ 4 ಗಂಟೆಯಿಂದ 7.30 ಗಂಟೆವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಸತಿ ನಿಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸಂಗೀತಾ ಬಿರದಾರ, ಮುಖಂಡರಾದ ಜಗನಾಥ ತಡಪಳ್ಳಿ, ಸುಧಾಕರ್‍ರಾವ, ಸಂಗಪ್ಪಾ, ವಿರೂಪಾಕ್ಷ ಗಾದಗಿ, ಸಂಗಮೇಶ ಎಣಕೂರ, ಸಂತೋಷಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.