ದಿ. 20ಕ್ಕೆ ಶ್ರೀ ಸಿದ್ಧಾರೂಢ ಮಠದಲ್ಲಿ ಜಲರಥೋತ್ಸವ
ಹುಬ್ಬಳ್ಳಿ,ಆ.14: ಶಿವಾವತಾರಿಯ ವಾಸಸ್ಥಾನವೆಂದೆ ಕರೆಸಿಕೊಳ್ಳುವ ಶ್ರೀ ಸಿದ್ಧಾರೂಢ ಮಠದ ಜಲರಥೊತ್ಸವ (ತೆಪ್ಪದ ತೇರು) ಆ. 20ರಂದು ಸಂಜೆ 5.30ಕ್ಕೆ ಜರುಗಲಿದೆ.
ಟ್ರಸ್ಟ್ ಕಮಿಟಿ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ವಿವರ ನೀಡಿ, ಸದ್ಗುರು ಶ್ರೀ ಸಿದ್ಧಾರೂಢರ 95ನೇ ಪುಣ್ಯಾರಾಧನೆ ಕಾರ್ಯಕ್ರಮವು ಇಂದು ಆರಂಭಗೊಂಡಿದ್ದು, ದಿ. 20ರಂದು ಜಲ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.
ನಿತ್ಯ ಶ್ರೀಮಠದ ಕೈಲಾಸ ಮಂಟಪದಲ್ಲಿ ಬೆಳಗ್ಗೆ 7.45ಕ್ಕೆ ಪುರಾಣ ಪಠಣ, 9.30ಕ್ಕೆ ಪ್ರವಚನ, ಸಂಜೆ 5 ಗಂಟೆಗೆ ಕೀರ್ತನೆ ಹಾಗೂ ರಾತ್ರಿ ಮಹಾಪೂಜೆ ಜರುಗಲಿದೆ ಎಂದು ತಿಳಿಸಿದರು.
ಶ್ರೀ ಸಿದ್ಧಾರೂಢರ ಸ್ವಾಮೀಜಿ ಜಲರಥೋತ್ಸವವು ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ ರಾಜ್ಯ ಗಳಿಂದ ಭಕ್ತರು ಆಗಮಿಸುತ್ತಾರೆ ಎಂದರು.
ಗೋಷ್ಠಿಯಲ್ಲಿ ಗೌ.ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಉದಯಕುಮಾರ ನಾಯ್ಕ, ವಿನಾಯಕ ಘೋಡ್ಕೆ, ಚನ್ನವೀರ ಮುಂಗರವಾಡಿ, ಶ್ಯಾಮಾನಂದ ಪೂಜೇರಿ, ಮ್ಯಾನೇಜರ್ ಈರಣ್ಣ ತುಪ್ಪದ ಇದ್ದರು.