ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ,ಆ.14: ತಾಲೂಕಿನ ಆಣೂರ ಮತ್ತು ಬುಡುಪನಹಳ್ಳಿ ಕೆರೆ ತುಂಬಿಸುವ ನೀರಾವರಿ ಯೋಜನೆಗಳಲ್ಲಿ ಸಮರ್ಪಕವಾಗಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆಯಿಂದ ಕಾರ್ಯ ವಹಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಅವರು, ಈಗಾಗಲೇ ತಾಲೂಕಿನಲ್ಲಿ ಈ ಎರಡು ಯೋಜನೆಗಳು ರೈತರಿಗೆ ವರದಾನವಾಗಿದ್ದು, ಈ ಯೋಜನೆಗಳ ಮೂಲಕ ತಾಲೂಕಿನಲ್ಲಿರುವ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ ವಹಿಸಲಾಗಿದೆ. ಆದರೂ ಸಹ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಈ ಯೋಜನೆಗಳಿಗಾಗಿ ವಿವಿಧ ಗ್ರಾಮಗಳ ಮೂಲಕ ಪೈಪಲೈನ್ ಅಳವಡಿಸಿ ವಾಲ್’ಗಳನ್ನು ಹಾಕಲಾಗಿದೆ. ಇಲ್ಲಿ ಕೆಲವರು ಈ ವಾಲ್’ಗಳನ್ನು ದುರ್ಬಳಕೆ ಮಾಡಿಕೊಂಡು ಕೆರೆಗಳಿಗೆ ಹೋಗಬೇಕಾದ ನೀರನ್ನು ತಮ್ಮ ಜಮೀನುಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡುತನ ತೋರುತ್ತಿದ್ದಾರೆ. ಈ ಕೂಡಲೇ ಅಧಿಕಾರಿಗಳು ನೀರಿನ ದುರ್ಬಳಕೆ ಮಾಡಿಕೊಂಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ತಾಲೂಕಾ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಮೌನೇಶ ಕಮ್ಮಾರ, ಜಾನ್ ಪುನೀತ್, ಬಸವರಾಜ ಕುಮ್ಮೂರ, ಮಲ್ಲಪ್ಪ ಕೊಪ್ಪದ, ಪ್ರವೀಣ ಹೊಸಗೌಡ್ರ, ಶಿವರಾಜ ಬನ್ನಿಹಟ್ಟಿ, ಪರಮೇಶ ಬ್ಯಾಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.