ಭಾರತೀಯ ವೀರ ಯೋಧ ಯಮ್ಮಿಗನೂರು ಶೇಕ್ ಸಾಬ್ ಇವರಿಗೆ ಒಂದು ಸಲಾಮ್”
ಜಾಗತಿಕ ಮಟ್ಟದಲ್ಲಿ ದೇಶ ಪ್ರಬಲ ಎನಿಸಿಕೊಳ್ಳಬೇಕಾದರೆ ನಾವುಗಳು ನೆಮ್ಮದಿಯಿಂದ ಜೀವನ ಮಾಡಬೇಕೆಂದರೆ, ನಮ್ಮ ದೇಶದ  ಭದ್ರತೆ ಮಹತ್ವದ ಪಾತ್ರ ವಹಿಸುತ್ತದೆ ಅಂತಹ ಮಹತ್ವದ ಪಾತ್ರ ನಿರ್ವಹಿಸುವಲ್ಲಿ ಶ್ರಮಿಸುತ್ತಿರುವ ನಮ್ಮ ಸಿರುಗುಪ್ಪ ತಾಲೂಕಿನ ವೀರ ಯೋಧರಲ್ಲಿ ಯಮ್ಮಿಗನೂರು ಶೆಕ್ ಸಾಬ್ ಒಬ್ಬರು ಆಗಿದ್ದಾರೆ.  ಇವರು ಜೂನ್ ೧, ೧೯೭೯ರಂದು ಜನಿಸಿದರು, ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಯವರಾಗಿದ್ದು ಇವರ ತಂದೆ ಎಮ್ಮಿಗನೂರ ಮೌಲಸಾಬ್, ತಾಯಿ ಎಮ್ಮಿಗನೂರ ಖಾಸಿಂಬಿ ಆಗಿದ್ದು ಪತ್ನಿ ನೂರ್ ಜಾನ್ ಹಾಗೂ ಮಹ್ಮಮದ್ ಅಕ್ಬರ್, ಮುಸ್ಕಾನ್ ತಾಜ್ ಎಂಬ ಇಬ್ಬರು ಮಕ್ಕಳು ಇದ್ದಾರೆ ಇವರು ಸಿರುಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬಿ.ಎ ಪ್ರಥಮ ವರ್ಷ ಇರುವಾಗ ಸೈನ್ಯಕ್ಕೆ ಸೇರಲು ಪೂರ್ವಸಿದ್ದತೆಯನ್ನು ಮಾಡಿಕೊಂಡಿದ್ದರು ಅದರಂತೆ ಇವರು ದೇಶ ಸೇವೆ ಮಾಡಲು ಸಿದ್ದರಾದರು.
ಭಾರತ ಗಡಿ ಭದ್ರತಾ ಪಡೆವತಿಯಿಂದ ೨೦೦೦ ಮಾರ್ಚ್ ೨೭ ರಿಂದ ಎಪ್ರಿಲ್ ೪ ರವರೆಗೆ ಬಳ್ಳಾರಿಯಲ್ಲಿ ಸಂಘಟಿಸಲಾದ ಗಡಿ ಭದ್ರತಾ ಪಡೆಯ ನೇರ ನೇಮಕಾತಿಯಲ್ಲಿ, ಸೈನಿಕರಾಗಿ ಆಯ್ಕೆಯಾಗಿ ಜೂನ್ ೬, ೨೦೦೦ ರಂದು ಕರ್ತವ್ಯಕ್ಕೆ ಹಾಜರಾದರು. ಇವರು ಜುಲೈ ೨೦೦೦ ರಿಂದ ಎಪ್ರಿಲ್ ೨೦೦೧ ರವರೆಗೆ ಅತ್ಯಂತ ಸೂಕ್ಷ್ಮ ಪ್ರದೇಶವಾದ ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)ದಲ್ಲಿ ಹತ್ತು ತಿಂಗಳು ಕಠಿಣ ತರಬೇತಿಮುಗಿಸಿ, ೨೦೦೧ ರಿಂದ ೨೦೦೫ರವರೆಗೆ ಭಾರತ-ಪಾಕಿಸ್ತಾನನದ ಅಂತರಾಷ್ಟ್ರೀಯ ಗಡಿಗಳಲ್ಲಿ ನಮ್ಮ ದೇಶಕ್ಕೆಕಂಟಕವಾದ ಉಗ್ರವಾದಿಗಳ ವಿರುದ್ಧ ವಿಶೇಷ ಕಾರ್ಯಾಚರಣೆಗಳಲ್ಲಿ ನಿರಂತರವಾಗಿ ೨೦೦೬ ರಿಂದ ೨೦೦೭ ರವರೆಗೆ ಭಾರತ ಮತ್ತು ಪಾಕಿಸ್ತಾನದ ಮದ್ಯ ಹೊಂದಿಕೊಂಡಿರುವ ಪಂಜಾಂಬ್ ಗಡಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ  ೨೦೦೮ ರಿಂದ ೨೦೧೦ರವರೆಗೆ  ಭಾರತ ಮತ್ತು ಪಾಕಿಸ್ತಾನದ ಗಡಿಗಳಿಗೆ  ಹೊಂದಿಕೊಂಡಿರುವ ಗುಜರಾತ್ನ ಕಚ್ ಬಾರ್ಡರ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಎಪ್ರಿಲ್ ೨೦೧೦ ರಿಂದ ಸೆಪ್ಟೆಂಬರ್ ೨೦೧೦ರವರೆಗೆ ಭಾರತ-ಪಾಕಿಸ್ತಾನದ “ಸಾಂಬಾ”  (ಜಮ್ಮು ಮತ್ತು ಕಾಶ್ಮೀರ)  ಬಾರ್ಡರ್ ನಲ್ಲಿ ತುರ್ತು ಸೇವೆ, ಅಕ್ಟೋಬರ್ ೨೦೧೦ ರಿಂದ ಡಿಸೆಂಬರ್ ೨೦೧೪ರ ವರೆಗೆ ‘ದಂಡಕಾರಣ್ಯ’ ಒಡಿಶಾ, ಛತ್ತಿಸ್ಗಡ ಮತ್ತು ಆಂಧ್ರ ಪ್ರದೇಶದ ಅಡವಿಗಳಲ್ಲಿ ನಕ್ಸಲ್ ವಿರುದ್ಧ ವಿಶೇಷ ಕಾರ್ಯಾಚರಣೆಯಲ್ಲಿ ಜನವರಿ ೨೦೧೫ ರಿಂದ ಪಶ್ಚಿಮ ಬಂಗಾಳದ ಭಾರತ ಬಾಂಗ್ಲಾದೇಶದ ಗಡಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮೇಘಾಲಯಕ್ಕೆ ವರ್ಗಾವಣೆ ಆಗಿದೆ, ಸಂಬಂಧಿಸಿದ ಇಲಾಖೆಯವರು ಕರ್ತವ್ಯದಿಂದ ಬಿಡುಗಡೆಮಾಡಿದಾಗ ಹೋಗಿ ಕಾರ್ಯನಿರ್ವಹಿಸಬೇಕು ಎಂದು ಖುಷಿಯಿಂದ ಮುಕ್ತವಾಗಿಮಾತನಾಡಿದರು. 
” ಘಟನೆಗಳ ಮೆಲುಕು….”
 ೨೦೦೧ ರಿಂದ ೨೦೦೨ ರವರೆಗೆ ಬಹಳಷ್ಟು ಸಲ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿ ದುಷ್ಟ ಉಗ್ರರನ್ನು ಹತ್ಯೆಗೈದು, ನಾವುಗಳು ಗಾಯಗೊಂಡು ದೇಶದ ರಕ್ಷಣೆಗಾಗಿ ನಮ್ಮ ಜೊತೆಗೆ ಹೋರಾಡಿ ಹುತಾತ್ಮರಾದ ಮಿತ್ರರನ್ನು ಕಳೆದುಕೊಂಡ ಕಹಿ ಕ್ಷಣಗಳನ್ನು ನೆನಪಿಸಿಕೊಂಡರೆ ಈಗಲು ದು:ಖವಾಗುತ್ತದೆ ಎಂದು ವೀರಯೋಧ ಯಮ್ಮಿಗನೂರು ಶೇಕ್ಸಾಬ್ ಮೌನವಾಗುತ್ತಾರೆ. ಮೇ ೨೩ ೨೦೦೪ ರಂದು ಯೋಧರ ಬಸ್, ಉಗ್ರರ ಬಾಂಬ್ ದಾಳಿಗೆ ಆಹುತಿಯಾಗಿ ೩೭ ಸೈನಿಕರ ದೇಹಗಳು ತುಂಡು-ತುಂಡಾಗಿ ಸತ್ತವರಲ್ಲಿ ತನ್ನ ಆಪ್ತಮಿತ್ರ ನಮ್ಮ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ ಗ್ರಾಮದ ವೀರ ಯೋಧ ಹನುಮಂತ ಹುತಾತ್ಮನಾದ ದುರ್ಘಟನೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾರೆ ಹುತಾತ್ಮ ಯೋಧನ ಅಸ್ತಿತಂದು ಸಿಂಗ್ರಿಹಳ್ಳಿ ಗ್ರಾಮದಲ್ಲಿ  ಸ್ಮಾರಕ ಮಾಡಲಾಗಿದೆ.
ನಮ್ಮ ದೇಶದ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅನಿವಾರ್ಯ ಕಾರಣಗಳಿಗೆ  ಕುಡಿಯಲು ಶುದ್ಧವಾದ ನೀರು, ಆಹಾರ ಸಿಗದೆ ಮೈಕೊರೆವ ಚಳಿಗೆ ನಿದ್ರೆಬರದೆ ಹಸಿವಿನಿಂದ ತತ್ತರಿಸಿದ ದಿನಗಳು ಸಾಕಷ್ಟು ಇವೆ ಈ ಘಟನೆಗಳನ್ನು ಹಾಗೂ ಮಧ್ಯ ರಾತ್ರಿ ಗಡಿಗಳಲ್ಲಿ, ದಟ್ಟ ಅರಣ್ಯಗಳಲ್ಲಿ ಏಕಾಂಗಿಯಾಗಿ ಕಳೆದ ಧೈರ್ಯವಂತಿಕೆಯ ಪರಾಕ್ರಮ ದಿನಗಳನ್ನು  ನಮ್ಮ ತಾಯಿ ಭಾರತ ಮಾತೆಯ ಚರಣಗಳಿಗೆ ಅರ್ಪಿಸುತ್ತೇನೆಂದು ಧನ್ಯತ ಭಾವನೆ ವ್ಯೆಕ್ತ ಪಡಿಸುತ್ತಾರೆ.
ಅಪಾರ ದೇಶ ಭಕ್ತಿ ಮೈಗೂಡಿಸಿಕೊಂಡಿರುವ ನಮ್ಮ ಹೆಮ್ಮೆಯ ಸೈನಿಕ…….!   
ಜೈ ಹಿಂದ್ ಎಂಬ ಘೋಷವಾಕ್ಯವನ್ನು ಇಂದಿನ ಯುವಕರ ಮೈಮನಗಳನ್ನು ರೋಮಾಂಚನಗೊಳ್ಳು ವಂತೆ ಹೇಳುತ್ತಾರೆ. ಜೈ ಹಿಂದ್ ಎಂದರೆ ಯಾವುದೇ ಧರ್ಮ-ಜಾತಿಗೆ ಸಂಬಂಧಿಸಿದ್ದಲ್ಲ ಇಡೀ ಭಾರತಮಾತೆಗೆ ಅಂದರೆ ಮಾತೃ ಭೂಮಿಗೆ ವಂದಿಸುವ ಮಾದರಿ ಎಂದು ಸ್ಪಷ್ಟಪಡಿಸುತ್ತಾರೆ.  ಇವರು ಭಾಷಣಮಾಡಲು ನಿಂತರೆ ವಿಶ್ವವಿದ್ಯಾಲಯದ ಅನುಭವ ಹೊಂದಿದ ಅಧ್ಯಾಪಕರನ್ನು ಮೀರಿಸುವಂತೆ ಗಂಟೆಗಟ್ಟಲೆ ದೇಶದ ಭದ್ರತೆಬಗ್ಗೆ  ವೀಕ್ಷಕರ ಮನಮುಟ್ಟುವಂತೆ ನಿರರ್ಗಳವಾಗಿ ಮಾತನಾಡುತ್ತಾರೆ. ಇಂದಿನ ಯುವಕರಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಕಡಿಮೆ ಆಗುತ್ತಿರುವದು ತುಂಬ ನೋವಿನ ವಿಷಯವೆಂದು ಆತಂಕ ವ್ಯಕ್ತಪಡಿಸುತ್ತಾರೆ.
ನಮ್ಮ ದೇಶದ ರಾಷ್ಟ್ರೀಯ ಹಬ್ಬ ಗಳನ್ನು ಮನೆಯಸಾಂಪ್ರದಾಯಿಕ ಹಬ್ಬಗಳಂತೆ ಪ್ರತಿಯೊಬ್ಬರು ಸಂಬ್ರಮ-ಸಡಗರದಿಂದ ಅಚರಿಸುವಂತೆ ಆಗಬೇಕು, ಎಂದು ದೇಶ-ವಾಸಿಗಳಿಗೆ ಮನ ಮುಟ್ಟುವಂತೆ ಹೇಳುತ್ತಾರೆ. ದೇಶದಲ್ಲಿ ಇರುವ ಎಲ್ಲ ರಾಜ್ಯಗಳಿಗೆ ನಮ್ಮ ರಾಜ್ಯವನ್ನು ಹೋಲಿಕೆ ಮಾಡಿ ಹೆಮ್ಮೆಯಿಂದ ನಮ್ಮರಾಜ್ಯ ಶಾಂತಿ ಯಿಂದ ಇರುವ ಸುಂದರಬೀಡು ಎಂದು ವರ್ಣಿಸುತ್ತಾರೆ. ಇಲ್ಲಿಯ ನಾಡಗೀತೆ ಇವರ ಅಚ್ಚುಮೆಚ್ಚಿನ ಗೀತೆ ಇವರು ಸಂತಶಿಶುನಾಳ ಷರೀಫರ ಗೀತೆಗಳನ್ನು ತುಂಬ ಮಧುರವಾಗಿ ಹಾಡುತ್ತಾರೆ ಹಾಗೂ ಸ್ವತ್ಹ ನೂರಾರು ಕವನಗಳನ್ನು ರಚಿಸಿ ವಾಚನ ಮಾಡಿದ್ದಾರೆ.
ಜಾಗತಿಕ ವಿದ್ಯಮಾನಗಳ ಬಗ್ಗೆ ವಿಮರ್ಶೆಮಾಡಿ, ವಿಶ್ಲೇಷಣೆ ಮಾಡಿ ಉತ್ತಮ ಪ್ರಗತಿಪರ ಚಿಂತನೆಗಳನ್ನು ತನ್ನ ಸಹಪಾಠಿಗಳ ಜೊತೆ ಹಂಚಿಕೊಳ್ಳುವುದು ಇವರಿಗೆ ಆಸಕ್ತಿಯ ವಿಷಯವಾಗಿದೆ. ಇವರು ೨೦೨೦ ಜುಲೈ ತಿಂಗಳಲ್ಲಿ ಸೈನಿಕ ವೃತ್ತಿಯಿಂದ ವಯೋನಿವೃತ್ತಿ ಹೊಂದಿದ್ದು ಇವರು ಮಾಜಿ ಸೈನಿಕರಾಗಿ  ಪ್ರಸ್ತುತ “ಕಲ್ಯಾಣ ಕರ್ನಾಟಕ ಮಾಜಿ ಅರೆಸೇನೆ ಪಡೆಗಳ ಸಂಘ”ವನ್ನು ಕಟ್ಟಿಕೊಂಡು ನಾಡಿನಾದ್ಯಂತ ಯುವಕರಲ್ಲಿ ದೇಶ ಭಕ್ತಿಮೂಡಲಿ ಎನ್ನುವ ಉದ್ದೇಶಗಳನ್ನು ಇಟ್ಟುಕೊಂಡು ಸಾವಿರಾರು ಯುವಕರಿಗೆ ನೂರಾರು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ, ಇದರಿಂದ ಯುವಕ-ಯುವತಿಯರಿಗೆ ಸೈನ್ಯಕ್ಕೆ ಸೇರಲು ಸ್ಪೂರ್ತಿ ತುಂಬಿದ್ದಾರೆ.
“ಜೈ ಹಿಂದ್”
“ಜೈ ಕರ್ನಾಟಕ ಮಾತೆ”
“ಜೈ ಜವಾನ್”
“ಜೈ ಕಿಸಾನ್”
:- ‌‌ಡಾ. ಕೆ.ಎಂ ಚಂದ್ರಕಾಂತ ತೆಕ್ಕಲಕೋಟೆ