ಪರಿಶ್ರಮದಿಂದ ತೋಟಗಾರಿಕೆ, ಕೃಷಿ ಹೆಚ್ಚು ಲಾಭದಾಯಕ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.14:ಹೆಚ್ಚಿನ ಪರಿಶ್ರಮ ಪಟ್ಟರೆ ಕೃಷಿ ಹಾಗೂ ತೋಟಗಾರಿಕೆಯನ್ನು ಲಾಭದಾಯಕವಾಗಿಸ ಬಹುದಾಗಿದ್ದು, ನೌಕರಿಗಿಂತಲೂ ಹೆಚ್ಚು ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ಜತೆಗೆ ಇದೊಂದು ದೇಶಸೇವೆಯೂ ಆಗಲಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ  ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಪಿತಾಮಹಾ ದಿ. ಡಾ. ಎಂ.ಹೆಚ್.ಮರಿಗೌಡರ ಜನ್ಮದಿನದ ಅಂಗವಾಗಿ ತೋಟಗಾರಿಕೆ ದಿನಾಚರಣೆ ಹಾಗೂ 2024-25ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ತೋಟಗಾರಿಕೆ ಬಗ್ಗೆ ಏರ್ಪಡಿಸಿದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ವಿದ್ಯಾರ್ಥಿಗಳಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾಗೂ ರೈತರ ಶ್ರಮದ ಬಗ್ಗೆ ಮಾಹಿತಿಯ ಕೊರತೆ ಇದೆ. ನಾವು ತಿನ್ನುವ ಆಹಾರ, ಹಣ್ಣು, ತರಕಾರಿ ಬೆಳೆಗಳನ್ನು ಯಾವ ರೀತಿಯಾಗಿ ಬೆಳೆಯುತ್ತಿದ್ದೇವೆ ಎಂಬುವುದರ  ಕುರಿತು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಜ್ಞಾನ ಅತ್ಯವಶ್ಯಕವಾಗಿ ಬೇಕಾಗಿದೆ.  ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ತೋಟಗಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ.  ಹೆಚ್ಚಿನ ಗಮನಹರಿಸಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ತೋಟಗಾರಿಕೆ ಬಗ್ಗೆ ತರಬೇತಿ ಪಡೆಯುವ ಮೂಲಕ ತಮಗೆ ಬೇಕಾಗಿರುವ ಹಣ್ಣು, ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು ಮುಂದಾಗಬೇಕು ಎಂದರು.ತೋಟಗಾರಿಕೆ ಪಿತಾಮಹಾ ದಿ.ಡಾ.ಎಂ.ಹೆಚ್.ಮರಿಗೌಡರು ತೋಟಗಾರಿಕೆ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಾಧನೆ ಮಾಡಿರುವ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ತಾವುಗಳು ಸಹ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.