ಶಿಕ್ಷಣಕ್ಕೆ ಸಮಾಜಮುಖಿ ಕಾಳಜಿ ಅತ್ಯಗತ್ಯ – ಮೈಲೇಶ ಬೇವೂರ್
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.14 ಅವಶ್ಯಕತೆಯುಳ್ಳವರಿಗೆ ನೆರವು ನೀಡುವ ಮಾನವೀಯ ಗುಣಗಳು ಇಂದಿನ ದಿನದಲ್ಲಿ ಹೆಚ್ಚಾಗಬೇಕಿವೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸಹಾಯಹಸ್ತ ಉಳಿದವಕ್ಕಿಂತ ಶ್ರೇಷ್ಠವಾಗುತ್ತದೆ. ಆ ಹಿನ್ನಲೆಯಲ್ಲಿ ಭಾರತದಲ್ಲಿ ಯಾರಿಗೆ ಅಗತ್ಯವಿದೆ ಅವರ ಅಗತ್ಯಗಳನ್ನು ಈಡೇರಿಸುವ ಆಶಯದಲ್ಲಿ ನೀಡ್ ಬೇಸ್ ಇಂಡಿಯಾ ಸಂಸ್ಥೆ ಕೆಲಸ ಮಾಡುತ್ತಿದೆ. ಇಂತಹ ಸಮಾಜ ಮುಖಿ ಕೆಲಸಗಳು ಅತ್ಯಗತ್ಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅವರು ಚಿಂತ್ರಪಳ್ಳಿ ಸರಕಾರಿ ಶಾಲೆಯಲ್ಲಿ ನಡೆದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ನೋಟ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ನೀಡಿದ್ದೇನೆ ಎನ್ನುವ ಗುಣ ಎಲ್ಲರಲ್ಲೂ ಬರಬೇಕು. ಇಂತಹ ಕಲಿಕೆಗೆ ಪೂರಕವಾದ ಕೆಲಸಗಳು ಶಿಕ್ಷಣದ ಮಟ್ಟವನ್ನು ಸುಧಾರಿಸುವಲ್ಲಿ ನೆರವಾಗುತ್ತವೆ. ನಮ್ಮಲ್ಲಿ ಕೃಷಿಕ ಕುಟುಂಬವೇ ಹೆಚ್ಚಿರುವುದರಿಂದ ಪಾಲಕರು ಮಕ್ಕಳಿಗೆ ಅಗತ್ಯ ಸಾಮಾಗ್ರಿಕೊಡಿಸುವುದಕ್ಕೆ ಮುಂದೆ ಬರುವುದಿಲ್ಲ. ಅಂತಹ ಮಕ್ಕಳಿಗೆ ಶಿಕ್ಷಣಾಸಕ್ತಿಗೆ ಈ ನೋಟ್ ಪುಸ್ತಕಗಳು ಶಕ್ತಿ ತುಂಬುತ್ತವೆ. ಇದು ಮೇಲಿನ ನೋಟದಲ್ಲಿ ಸಣ್ಣ ನೆರವು ಎನಿಸಬಹುದು ಆದರೇ ನಂತರದಲ್ಲಿ ಬಹುದೊಡ್ಡ ಪರಿಣಾಮವನ್ನು ಬೀರುತ್ತದೆ. ತಾಲೂಕಿನ 14 ಶಾಲೆಯ ಮಕ್ಕಳಿಗೆ 10ಸಾವಿರ ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವ  ನೀಡ್ ಬೇಸ್ ಇಂಡಿಯಾ ಸಂಸ್ಥೆಯ ಕೆಲಸ ಸಾಮಾನ್ಯವಲ್ಲ. ಇದನ್ನು ನಮ್ಮ ಮಕ್ಕಳು ಸರಿಯಾಗಿ ಪ್ರಯೋಜನ ಪಡೆಯಲಿ. ಇಂತಹ ಕೊಡುಗೆಗಳು ನಮ್ಮ ಸರಕಾರಿ ಶಾಲಾ ಮಕ್ಕಳಿಗೆ ಇನ್ನಷ್ಟು ತಲುಪಲಿ ಎನ್ನುವ ಅಶಯವನ್ನು ಮೈಲೇಶ್ ಬೇವೂರ್ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಲೋಕಪ್ಪ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಅವರು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಪರಮೆಶ್ವರಯ್ಯ ಸೊಪ್ಪಿಮಠ ಅವರು ನೀಡ್ ಬೇಸ್ ಇಂಡಿಯಾ ಸಂಸ್ಥೆಯ ಮಾಡುವ ಎಲ್ಲಾ ಸಮಾಜಮುಖಿ ಕೆಲಸಗಳನ್ನು ಮತ್ತು ಈ ನೋಟ್ ಪುಸ್ತಕಗಳನ್ನು ತರಿಸುವ ಕಾರ್ಯದ ಕುರಿತಾಗಿ ತಿಳಿಸಿದರು.
ವೇದಿಕೆಯ ಮೇಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀಮತಿ ಬಿ.ಜ್ಯೋತಿ, ಹ.ಬೊ.ಹಳ್ಳಿ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಜ್ಜಿಗಿ ವೀರೇಶ, ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂ.ಪಿ.ಎಂ.ಮಂಜುನಾಥ, ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ಕೃಷ್ಣನಾಯ್ಕ್, ಜಿ.ಪಿ.ಟಿ.¸ಂಘದ ಅಧ್ಯಕ್ಷರಾದ ವೀರನಗೌಡ, ಶಿಕ್ಷಕರ ಸಂಘದ ಸೋಮಶೇಖರ, ಊರಿನ ಪ್ರಮುಖರಾದ ಎಂ.ಗಂಗಾಧರ, ಬಣಕಾರಗೋಣೆಪ್ಪ, ಎಸ್.ಗುರುಬಸವರಾಜ, ಬೆಳ್ಳಕ್ಕಿ ರಾಮಣ್ಣ, ಪೂಜಾರ ಸುರೇಶ, ಇಸಿಓ ಮುಸ್ತಾಕ್ ಅಹ್ಮದ್, ಬಿಆರ್‍ಪಿ ರುದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ತಾಲೂಕಿನ ಪ್ರಾಥಮಿಕ ಶಾಲೆಗಳಾದ ಹರೇಗೊಂಡನಹಳ್ಳಿ, ಮಾಲವಿ, ಸೊನ್ನ, ಚಿಂತ್ರಪಳ್ಳಿ, ಬಿಜಿಹಳ್ಳಿ, ಹೊಸಕೇರಿ, ಏಣಿಗಿ ಬಸಾಪುರ, ಬನ್ನಿಕಲ್ಲು, ಹಬೊಹಳ್ಳಿ, ಅಡವಿ ಆನಂದದೇವನಹಳ್ಳಿ ಮತ್ತು ಬನ್ನಿಗೋಳ, ಸೊನ್ನ, ಅಂಕಸಮುದ್ರ, ಬಸರಕೋಡು ಪ್ರೌಢಶಾಲೆಗಳ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿದರೆ, ಶಾಲಾ ಮುಖ್ಯಗುರುಗಳಾದ ಬಸಪ್ಪರವರು ಸ್ವಾಗತಿಸಿದರು. ವಾಮದೇವ ಅವರು ನಿರ್ವಹಿಸಿದರೆ ಕೊನೆಗೆ ಕೊಟ್ರೇಶ ನಾಯ್ಕ್ ಅವರು ವಂದಿಸಿದರು.