ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ: ಕ್ರಮಕ್ಕೆ ದಸಂಸ ಆಗ್ರಹ
ಕೋಲಾರ,ಆ.೧೪- ಜಿಲ್ಲೆಯ ವಸತಿ ಶಾಲೆಗಳಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ವಿದ್ಯಾರ್ಥಿಗಳ ಮೇಲೆ ನಡೆಯುತ್ತಲೇ ಇದ್ದು, ಜಿಲ್ಲಾಡಳಿತ ಮಾತ್ರ ಯಾವುದೇ ಕಟ್ಟುನಿಟ್ಟಿನ ಕ್ರಮವಿಲ್ಲದೆ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಅರೋಪಿಸಿದರು
ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳ ವಿಚಾರದಲ್ಲಿ ದುರ್ಘಟನೆಗಳ ಸದ್ದು ಮಾಡುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಯಲುವಹಳ್ಳಿ ಗ್ರಾಮದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಸಿಬ್ಬಂದಿ ಮಲ ಎತ್ತಿಸುವ ಮೂಲಕ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದ ಘಟನೆ, ಬೃಂದಾವನ ವೃತ್ತ (ಕೋರ್ಟ್ ಸರ್ಕಲ್) ನ ಬಾಲಕಿಯರ ವಿಧ್ಯಾರ್ಥಿ ನಿಲಯದ ವಿದ್ಯಾರ್ಥಿಯ ತಟ್ಟೆಯಲ್ಲಿ ಹಲ್ಲಿ ಬಿದ್ದ ಘಟನೆ, ಕೋಲಾರ ತಾಲೂಕಿನ ಅಮ್ಮನಲ್ಲೂರು ಗ್ರಾಮ ಅಂಬೇಡ್ಕರ್ ವಸತಿ ನಿಲಯಲ್ಲಿ ಬೆಳಗಿನ ತಿಂಡಿ ದೋಸೆ ತಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಇದಕ್ಕೂ ತಮ್ಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ಕೆಲ ವಸತಿ ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಗಳು ಮನಸೋ ಇಚ್ಛೆ ಬಂದಂತೆ ವಿದ್ಯಾರ್ಥಿಗಳ ಜೀವದ ಜತೆಯಲ್ಲಿ ಚಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಇಂತಹ ಘಟನೆಗಳು ನಡೆದರೆ, ಕ್ರಮ ವಹಿಸುವ ಜವಾಬ್ದಾರಿ ಯಾರದು ಎಂದು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳು ನಡೆದ ಮೇಲೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ತಾಲೂಕು, ಜಿಲ್ಲಾ, ರಾಜ್ಯ, ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುವ ಮೊದಲೇ, ಇದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಸತಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಗಳ ಸಭೆಯನ್ನು ಆಯೋಜಿಸಿ ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಆದರೆ ಜಿಲ್ಲೆಯ ಶಾಸಕರು ಕೇವಲ ಅಧಿಕಾರಿಗಳ ಕಚೇರಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಸತಿ ನಿಲಯದ ಸಿಬ್ಬಂದಿ ಮತ್ತು ವಾರ್ಡನ್ ಗಳು ವಿದ್ಯಾರ್ಥಿಗಳನ್ನು ವೈಯುಕ್ತಿಕ ಕೆಲಸಗಳಿಗೂ ಸಹ ಬಳಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ, ಈ ನಿಟ್ಟಿನಲ್ಲಿ ಚುರುಕು ಮುಟ್ಟಿಸುವ ಜತೆಯಲ್ಲೇ ವಿದ್ಯಾರ್ಥಿಗಳ ಸುರಕ್ಷತೆಗೆ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ವಸತಿ ಶಾಲೆಗಳಿಗೆ ದೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸುವಂತ ಅಗತ್ಯವಿದೆ ಎಂದರು.