ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಾಯಕೊಂಡದಲ್ಲಿ ಅಭಿವೃದ್ಧಿ ಪರ್ವ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೪: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಎಲ್ಲಾ ವರ್ಗಗಳನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದನ್ನು ಬಿಜೆಪಿಯರಿಗೆ ಸಹಿಸಲು ಆಗುತ್ತಿಲ್ಲ ಎಂದು ಮಾಯಕೊಂಡ ಕ್ಷೇತ್ರದ ಮುಖಂಡ, ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ಕೊಟ್ರೇಶ್ ನಾಯ್ಕ ಹೇಳಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿಗಳ ಮೂಲಕ ಗೃಹ ಜ್ಯೋತಿ ಮೂಲಕ ಉಚಿತ ವಿದ್ಯುತ್, ಗೃಹಲಕ್ಷ್ಮೀ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2ಸಾವಿರ, ಗೃಹ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಹಾಗೂ ಅನ್ನಭಾಗ್ಯ ಯೋಜನೆ ಮೂಲಕ ಎಲ್ಲಾ ಬಿ.ಪಿ.ಎಲ್. ಕಾರ್ಡದಾರರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ ವಿತರಣೆ, ಯುವನಿಧಿ ಮೂಲಕ ಪದವೀಧರರಿಗೆ 3ಸಾವಿ ಹಾಗೂ ಡಿಪ್ಲೋಮಾ ಉತ್ತೀರ್ಣರಾದವರಿಗೆ ಪ್ರತಿ ತಿಂಗಳು 1500 ಗಳನ್ನು ವಿತರಿಸುವ ಮೂಲಕ ಸಮಾಜದ ಎಲ್ಲಾ ವರ್ಗದ ಅಭಿವೃದ್ಧಿಗೆ ಮುಂದಾಗಿದೆ ಎಂದು ತಿಳಿಸಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಅವರು ಆಯ್ಕೆಯಾದಾಗಿನಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು, ಕ್ಷೇತ್ರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳು, ಪಶು ಚಿಕಿತ್ಸಾ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಟ್ಟಡಗಳ ದುರಸ್ತಿ ಹಾಗೂ ಹೊಸದಾಗಿ ನಿರ್ಮಾ ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಿವೆ ಎಂದು ಮಾಹಿತಿ ನೀಡಿದರು. ಅಲ್ಲದೇ ಕ್ಷೇತ್ರಗಳ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆಗಳು, ಚರಂಡಿ ಒಳಚರಂಡಿ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಭೀಕರ ಬರಗಾಲದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 150 ಬೋರ್ ವೆಲ್ ಗಳನ್ನು ಕೊರೆಸಿ ನೀರಿನ ಸಮಸ್ಯೆ ಇಲ್ಲದಂತೆ ಕಾರ್ಯನಿರ್ವಹಿಸಿದರು. ಇತ್ತೀಚೆಗೆ ತ್ಯಾವಣಗಿ ಗ್ರಾಮದಲ್ಲಿ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿದ್ದು. ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 45 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಮಳೆಗಾಲದಿಂದ ವಿಳಂಬವಾಗಿದ್ದು ಶೀಘ್ರದಲ್ಲಿಯೇ ಆರಂಭವಾಗಲಿವೆ ಎಂದು ಹೇಳಿದರು.ಇದಲ್ಲದೇ 22 ಕೆರೆಗಳ ಏತ ನೀರಾವರಿ ಯೋಜನೆಗೆ ಹೊಸದಾಗಿ ಪೈಪ್ಲೈನ್ ಅಳವಡಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಹಕಾರದೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರರ ಗಮನಕ್ಕೆ ತಂದು 50 ಕೋಟಿ ರೂಪಾಯಿಗಳನ್ನು ಮಂಜೂರಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮಾಯಕೊಂಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸುಮಾರು 200 ಕೋಟಿಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದು, ಮಾಯಕೊಂಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಲಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಟಿ.ಸಿ.ಗೋವಿಂದ ಸ್ವಾಮಿ, ಕೆ.ಸಿ.ಚಂದ್ರಶೇಖರ, ನಲ್ಕುದುರೆ ವಿಜಯಕುಮಾರ್  ಇದ್ದರು.