ಯಾರ ಹಂಗಿನಲ್ಲೂ ಇಲ್ಲ; ಸ್ವಾಭಿಮಾನಿಯಾಗಿರುವೆ; ಉಚ್ಚಾಟಿಸಿದರೂ ತೊಂದರೆಯಿಲ್ಲ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೪:  ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಅಹಿಂದ ವರ್ಗಗಳ ಪ್ರತಿನಿಧಿಯಾಗಿ ಧ್ವನಿ ಎತ್ತಿದ್ದೇನೆ. ಶೋಷಿತ ವರ್ಗಗಳ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಪದಚ್ಯುತಿಗೆ ನಡೆಸುತ್ತಿರುವ ಕುತಂತ್ರಗಳ ಬಗ್ಗೆ ಮಾತನಾಡಿದ್ದೇನೆ. ಇದು ಮಹಾಪರಾಧವೆಂಬಂತೆ ದಾವಣಗೆರೆ ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಹೇಳಿರುವುದು ಸರಿಯಲ್ಲ ಎಂದು ಸ್ವಾಭಿಮಾನಿ ಬಳಗದ ಜಿ.ಬಿ ವಿನಯಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಹಿಂದ  ವರ್ಗಗಳ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಷ್ಟ್ರೀಯ ಪಕ್ಷದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಸುದ್ದಿಗೋಷ್ಟಿಯಲ್ಲಿ “ಏಕವಚನ” ಪ್ರಯೋಗಿಸಿರುವುದು ಶೋಷಿತ ವರ್ಗಗಳ ದುರಾದೃಷ್ಟ. ವಿನಯ್‌ ಕುಮಾರ್  ಜಾತಿ, ಜಾತಿಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ ಎಂಬ ಮಾತುಗಳನ್ನಾಡಿರುವ ಜಿಲ್ಲಾಧ್ಯಕ್ಷರು, ಲೋಕಸಭಾ ಚುನಾವಣೆಯ ಎರಡು ದಿನಗಳ ಮುಂಚಿತವಾಗಿ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುರುಬ ಸಮುದಾಯದ ಸಭೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿ, ಈ ನಾಡಿನ ಮುಖ್ಯಮಂತ್ರಿಗಳಿಂದ ‘ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್‌ ಒಂದೇ ಒಂದು ಓಟ್” ಹಾಕಬಾರದೆಂದು ಹೇಳಿಸಿದ್ದವರು ಯಾರು ? ಹೊನ್ನಾಳಿಯಲ್ಲಿ ನಡೆದ ಸಭೆಯಲ್ಲಿ “ಒಬ್ಬ ಕುರುಬ ಜಾತಿಯ ವ್ಯಕ್ತಿ” ಸ್ಪರ್ಧೆ ಮಾಡಿದ್ದಾನೆ ಅಂತ ಓಟ್ ಹಾಕ್ತಿರಾ ಎಂದು ಹೇಳಿಸಿದವರು ಯಾರು ? ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಯಾಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದರು.2024ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಿದ್ದು “ಪಕ್ಷೇತರ’ನಾಗಿ, ನಾನು ಗೆಲ್ಲುವಂತಹ ವಾತಾವರಣವಿದ್ದಾಗ, ನನಗೆ ಟಿಕೆಟ್ ತಪ್ಪಿಸಲು ಹಾಗೂ ನನ್ನ ಮೇಲೆ ಜನರಿಗೆ ತಪ್ಪು ಅಭಿಪ್ರಾಯ ಮೂಡಿಸಲು ಸ್ವಾಮಿಜೀಗಳು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವಂತೆ ಮಾಡಿ, ಯಾವುದೇ ಮಾತುಕತೆಗೂ ಅವಕಾಶ ನೀಡದ ಸನ್ನಿವೇಶವನ್ನು ಸೃಷ್ಟಿಸಿದರು ಎಂದು ಆರೋಪಿಸಿದರು.ಅಹಿಂದ ವರ್ಗದ ಕಾಂಗ್ರೇಸ್ ಜಿಲ್ಲಾಧ್ಯಕ್ಷರಿಗೆ ಹೊನ್ನಾಳಿ ವಿಧಾನಸಭೆ ಟಿಕೆಟ್, ಲೋಕಸಭಾ ಟಿಕೆಟ್ ಕೊಡಬೇಕಿತ್ತು.ಜಿಲ್ಲೆಯಲ್ಲಿ ಕಾಂಗ್ರೇಸ್ ಶಾಸಕರುಗಳು ಇಲ್ಲದೇ ಇದ್ದಾಗ, ಗೆಲ್ಲುವ ವಾತಾವರಣ ಇಲ್ಲದೇ ಇರುವಾಗ ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದ್ದಾರೆ. 2024ರಲ್ಲಿ ಗೆಲ್ಲುವ ವಾತಾವರಣವಿದ್ದಾಗ, ಟಿಕೆಟ್ ತಪ್ಪಿಸಲಾಗುತ್ತದೆ ಎಂದರು.ಅಹಿಂದ ವರ್ಗಗಳ ಮುಖ್ಯಮಂತ್ರಿಗೆ ಅನ್ಯಾಯವಾಗುತ್ತಿದೆ ಎನ್ನುವಾಗ ನಾನು ಧ್ವನಿ ಎತ್ತಿದ್ದೇನೆ ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ನಾಯಕರುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವಾಗಲೂ ಧ್ವನಿ ಎತ್ತುತ್ತೇನೆ. ಶೋಷಿತರ ಶಕ್ತಿಯನ್ನು ಮನದಟ್ಟು ಮಾಡಲು ರಾಜ್ಯಾದ್ಯಂತ “ಶೋಷಿತರ ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ” ಮಾಡುತ್ತಿದ್ದೇನೆ. ಧ್ವನಿಯಿಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಪಡೆಯಲು ಅವರೊಂದಿಗಿರುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಅಲ್ತಫ್,ಪ್ರಸನ್ನಕುಮಾರ್ ಉಪಸ್ಥಿತರಿದ್ದರು.