ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕಲಿಕೆ ಕಾರ್ಯಕ್ರಮ
ಕೋಲಾರ,ಆ.೧೪- ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ, ಸ್ವಯಂಸೇವಾ ಸಂಸ್ಥೆಗಳ ಮೂಲಕ ವಯಸ್ಕರ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಿಕೆ ನೀಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗದ ರೋಟರಿ ಸಂಸ್ಥೆಯ ಪಿ.ಡಿ.ಜಿ ಗೌರ್ನರ್ ರಾಜೇಂದ್ರ ರಾಯ್ ತಿಳಿಸಿದರು.
ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಗ್ರಂಥಾಲಯದಲ್ಲಿ ಬೆಂಗಳೂರು ರೋಟರಿ ಪಾಲ್ಮ್ ವಿಲ್ಲೆ ೩೧೯೧ ಸಂಸ್ಥೆ ಮತ್ತು ಫೋಕಸ್ ಸ್ವಯಂ ಸೇವಾ ಸಂಸ್ಥೆ ಬಂಗಾರಪೇಟೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ, ಕಲಿಕಾ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಲಿಟ್ರಸಿ ಮಿಷನ್ ಅಡಿಯಲ್ಲಿ ಕೋಲಾರ ಜಿಲ್ಲೆಯ ಗಡಿ ಭಾಗಗಳಲ್ಲಿ ಮತ್ತು ಅಕ್ಷರ ವಂಚಿತ ಪ್ರದೇಶಗಳಲ್ಲಿ ಕಲಿಕಾ ಕೇಂದ್ರಗಳನ್ನ ಪ್ರಾರಂಭಿಸುವ ಮೂಲಕ ೧೮ ರಿಂದ ೫೫ ವರ್ಷದ ಎಲ್ಲಾ ಅನಕ್ಷರಸ್ಥರನ್ನು, ಅಕ್ಷರಸ್ಥರನ್ನಾಗಿ ಮಾಡಬೇಕಾಗಿದೆ ಇದಕ್ಕೆ ಎಲ್ಲಾ ಸ್ವಯಂ ಸೇವ ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು, ಸಮುದಾಯದ ಪ್ರತಿಯೊಬ್ಬರು ಸಹಕಾರವನ್ನು ನೀಡಿ, ಅಕ್ಷರ ಕಲಿಸುವ ಕಾರ್ಯಕ್ಕೆ ತಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದ ಅವರು ಈಗಾಗಲೇ ಕಳೆದ ಹಲವು ವರ್ಷಗಳಿಂದ ರೋಟರಿ ಸಂಸ್ಥೆ ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ, ಸಮುದಾಯಕ್ಕೆ ಸಾಕಷ್ಟು ಸೇವೆಯನ್ನ ಮಾಡುತ್ತಾ ಬಂದಿದ್ದು, ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ, ರೋಟರಿ ಸಂಸ್ಥೆಗೆ ಲಭಿಸಿದೆ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ ಫೋಕಸ್ ಸ್ವಯಂ ಸೇವಾ ಸಂಸ್ಥೆ ಹಲವು ಜನಪರ ಸಮುದಾಯ ಕಾರ್ಯಗಳನ್ನ ಮಾಡುತ್ತ ಬಂದಿರುವ ಹಿನ್ನೆಲೆಯಲ್ಲಿ ವಸ್ಕರಿಗೆ ಅಕ್ಷರ ಕಲಿಸುವ ಜವಾಬ್ದಾರಿಯನ್ನು ರೋಟರಿ ಸಂಸ್ಥೆ ನೀಡಿದ್ದು ಪ್ರತಿ ತಾಲೂಕಿನಲ್ಲಿಯೂ ಸಹ ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಅಕ್ಷರಭ್ಯಾಸ ಮಾಡಿಸಲಾಗುವುದು ಎಂದು ತಿಳಿಸಿ ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ಕೋರಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹಾಗೂ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಪ್ರಸಾದ್ ಮಾತನಾಡಿ, ಅಕ್ಷರ ಕಲಿಕೆಯ ಕಾರ್ಯದಲ್ಲಿ ಗ್ರಾಮ ಪಂಚಾಯಿತಿಯು ಸಂಪೂರ್ಣ ಸಹಕಾರವನ್ನು ನೀಡಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಹಳ್ಳಿ ಬೆಟ್ಟದ ಮೇಲೆ ಇರುವ ಗ್ರಾಮಗಳಲ್ಲಿಯೂ ಸಹ ಅನಕ್ಷರಸ್ಥರು ಹೆಚ್ಚಾಗಿದ್ದು, ಆ ಗ್ರಾಮಗಳಲ್ಲಿ ಎಲ್ಲರನ್ನ ಅಕ್ಷರಸ್ಥರನ್ನಾಗಿ ಮಾಡಲು ರೋಟರಿ ಸಂಸ್ಥೆ ಮತ್ತು ಫೋಕಸ್ ಸಂಸ್ಥೆಗೆ ಗ್ರಾಮ ಪಂಚಾಯಿಯು ಸಂಪೂರ್ಣ ಬೆಂಬಲವನ್ನ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್, ಸದಸ್ಯ ಶ್ರೀನಿವಾಸ್, ಬೆಂಗಳೂರು ರೋಟರಿ ಸಂಸ್ಥೆಯ ಅಧ್ಯಕ್ಷ ತೋಷಿ ಪ್ರಸಾದ್, ರೋಟರಿನ್ ರಿಂಕಿ, ಆಶಾ ಜೈನ್, ಸೂರ್ಯಪ್ರಕಾಶ್ ರತ್ನಂ, ಕೋಲಾರ ರೋಟರಿ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ.ಸುಧಾಕರ್, ಫೋಕಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆ.ನಾ ಹರೀಶ್, ಕಾರ್ಯದರ್ಶಿ ಲಲಿತಮ್ಮ, ಕಲಾವಿಭಾಗದ ಸಂಚಾಲಕ ಹಿರೇಕರಪ್ಪನಲ್ಲಿ ಯಲ್ಲಪ್ಪ, ಗಾಯಕ ಚಲಪತಿ, ಗೊಲ್ಲಹಳ್ಳಿ ಬಾಲಕೃಷ್ಣ, ಎಂ.ಎನ್.ರವೀಂದ್ರ, ಗ್ರಂಥಪಾಲಕಿ ಕೊಂಡರಾಜನಹಳ್ಳಿ ಮಂಜುಳಾ, ವಿಕಲಚೇತನರ ಜಿಲ್ಲಾಧ್ಯಕ್ಷ ಸುಪ್ರೀಂ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತೆ ಸುನಂದಮ್ಮ, ಸುಜಾತಮ್ಮ, ಕಾರ್ಯಕ್ರಮ ಅಧಿಕಾರಿ ಭವೇಂದ್ರ ಹಾಗೂ ವಿವಿಧ ಕೇಂದ್ರಗಳಿಂದ ಆಗಮಿಸಿದ ಬೋಧಕರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.