ವಿದ್ಯಾರ್ಥಿಗಳು ಉದ್ಯಮಿಗಳಾಗಲು ಅಗತ್ಯ ಸೌಲಭ್ಯ ಪಡೆಯಲು ಕರೆ:ಉದ್ಯಮಿ ಮೌಲಾಲಿ ಅನಪೂರ
ಯಾದಗಿರಿ : ಆ.೧೪ : ವಿದ್ಯಾರ್ಥಿಗಳು ಮುಂದಿನ ತಮ್ಮ ಭವಿಷ್ಯದಲ್ಲಿ ವಿವಿಧ ಉದ್ಯಮಶೀಲತೆ ತರಬೇತಿ ಸದುಪಯೋಗ ಪಡೆದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯಮಿಗಳಾಗಿ ಹೊರ ಹೊಮ್ಮಲು ಮುಂದಾಗಬೇಕು ಎಂದು ಉದ್ಯಮಿಗಳಾದ ಮೌಲಾಲಿ ಅನಪೂರ ಅವರು ಕರೆ ನೀಡಿದರು.
ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತ ಮತ್ತು ಜೀವನೋಪಾಯ ಇಲಾಖೆ, ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಯಾದಗಿರಿ ವತಿಯಿಂದ ವಿವಿಧ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ೩ ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಶೀಲತೆಯ ಉದ್ದೇಶವನ್ನು ಬಲಪಡಿಸುವಲ್ಲಿ ಉದ್ಯಮಶೀಲತೆಯ ಪಾತ್ರ ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪಡೆದುಕೊಳ್ಳುವಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಾಗಬೇಕು, ಉದ್ಯಮ ಪ್ರಾರಂಭಿಸಲು ಬೇಕಾದ ಸೌಲಭ್ಯದ ಸ್ಪಷ್ಟತೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಮಶೀಲತೆಯ ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲು ಮತ್ತು ಬಲಪಡಿಸಲು ಮತ್ತು ಆರ್ಥಿಕ ಪ್ರಗತಿಯನ್ನು ಸಮಾನವಾಗಿ ಹಂಚಿಕೊಳ್ಳಲು ಉದ್ಯಮಶೀಲತೆಯ ಅಭಿವೃದ್ಧಿ ತರಬೇತಿ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪೂರ್ಣಗೊಳಿಸಿದ ನಂತರ ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಇಂತಹ ಹಲವಾರು ಉದ್ಯಮಶೀಲತಾ ತರಬೇತಿಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಲವಾರು ಕಿರು ಹಾಗೂ ಮಧ್ಯಮ ಉದ್ದಿಮೆಗಳನ್ನು ಸ್ಥಾಪಿಸಲು ಹಲವಾರು ಅವಕಾಶಗಳಿದ್ದು, ಹಲವಾರು ಬ್ಯಾಂಕುಗಳು ಸಾಲ ಸೌಲಭ್ಯ ಒದಗಿಸಲು ಮುಂದೆ ಬರುತ್ತವೆ. ಅವುಗಳ ಸಹಾಯ ಪಡೆದುಕೊಂಡು ಉದ್ಯಮಗಳನ್ನು ಸ್ಥಾಪಿಸಿ ತಾವುಗಳು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು, ಪರಿಣಿತ ಸಂಪನ್ಮೂಲ ವ್ಯಕ್ತಿಗಳ ತರಬೇತಿಯನ್ನು ನೀಡುತ್ತಿದ್ದು ಉದ್ಯಮದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನು ಕೆಂಡುಕೊಳ್ಳಲು ತರಬೇತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಲಬುರಗಿ ಸಿಡಾಕ್ ಸಂಸ್ಥೆ ಸೈಯ್ಯರ್ ಆಶಿಕ್ ಅಹ್ಮದ್ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಜಗತ್ತು ತುಂಬಾ ಮುಂದೆ ಹೋಗುತ್ತಿದೆ. ತಾವು ಉದ್ಯಮಿಗಳಾಗಲು ಹಲವಾರು ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಉಪ ಪ್ರಾಂಶುಪಾಲರಾದ ಬಸಪ್ಪ ಕ್ಯಾತನ್‌ಕರ್ ಅವರು ವಿದ್ಯಾರ್ಥಿ ಉದ್ದೇಶಿಸಿ ಮಾತನಾಡಿದರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಯೋಜನೆಗಳು ಅನುಷ್ಠಾನಗೊಳ್ಳುತ್ತೀವೆ, ಇಂತಹ ಯೋಜನೆಗಳಿಂದ ದೊರೆಯುವ ಸೌಲಭ್ಯಗಳನ್ನು ಉಪಯೊಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಅರ್ಥಶಾಸ್ತç ಉಪನ್ಯಾಸಕರಾದ ಅಶೋಕ ವಾಟ್ಕರ್, ಕಲಬುರಗಿ ಸಿಡಾಕ್ ಸಂಸ್ಥೆ ಅಬ್ದುಲ್ ರಹಮಾನ್, ಬ್ಯಾಂಕ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಧರ ಜೋಶಿ ಉಪಸ್ಥಿತರಿದ್ದರು, ಯಾದಗಿರಿ ಸಿಡಾಕ್ ಸಂಸ್ಥೆ ಸಹಾಯಕರಾದ ವಸಂತಕುಮಾರ ಕಾರ್ಯಕ್ರಮ ನಿರೂಪಿಸಿದರು, ಯಾದಗಿರಿ ಸಿಡಕ್ ತರಬೇತಿದಾರರು ಕುಮಾರಿ ಉಷಾ ವಂದನಾರ್ಪಣೆ ಮಾಡಿದರು.