ಆ.28ಕ್ಕೆ ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ಸಂವಿಧಾನ ಪರ, ಸಂವಿಧಾನ ರಕ್ಷಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಸಂವಿಧಾನದ ಯಾವುದೇ ಆಶಯಗಳನ್ನೂ ಪಾಲಿಸುತ್ತಿಲ್ಲ. ಹೀಗಾಗಿ ಇದೇ ಆ.28 ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ ಎಂಬ ಪ್ರತಿಭಟನಾ ಸಮಾವೇಶವನ್ನು ಕರ್ನಾಟಕ ಅಹಿಂದ ಸಂಘನೆಗಳ ಒಕ್ಕೂಟದ ವತಿಯಿಂದ ಆಯೋಜಿಲಾಗಿದೆ ಎಂದು ಹೋರಾಟಗಾರ ಹರಿರಾಂ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ. ದಲಿತರಿಗೆ ಮೀಸಲಾದ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಯ ಸುಮಾರು 26 ಸಾವಿರ ಕೋಟಿ ರೂ.,ಗಳನ್ನು ಸಕಾರ ತನ್ನ ಗ್ಯಾರಂಟಿ ಯೋಜನೆಗೆ ಬಳಸಿ, ಈ ಸಮುದಾಯಗಳನ್ನು ವಂಚಿಸಿದೆ ಎಂದು ದೂರಿದರು.
ದಲಿತ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ಪಿಎಚ್‍ಡಿ ಮಾಡಲು ಅನುಕೂಲವಾಗಿದ್ದ ಪ್ರಬುದ್ಧ ಯೋಜನೆ ರದ್ದುಗೊಳಿಸಲಾಗಿದೆ. ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಒಳ ಮೀಸಲಾತಿ ಜಾರಿಗೊಳಿಸಿಲ್ಲ. ದಲಿತರಿಗೆ ಭೂಮಿ ಹಂಚಿಕೆ ಮಾಡುತ್ತಿಲ್ಲ. ಇದರೊಡನೆ ರಾಜ್ಯದಲ್ಲಿ ದಲಿತರ ಮಾರಣ ಹೋಮ ನಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತಿಂದು ತೇಗಲಾಗಿದೆ. ಹೀಗಾಗಿ ಈ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಿಂದ ಸುಮಾರು ಸಾವಿರ ಮಂದಿ ಪಾಲ್ಗೊಳ್ಳುತ್ತಿದ್ದಾರೆಂದರು.
ನಟ ಅಹಿಂಸಾ ಚೇತನ್, ಭಾಸ್ಕರ್ ಪ್ರಸಾದ್, ರಮೇಶ್, ಮೋಹನ್ ದಾಸ್, ಶಂಕರಲಿಂಗಯ್ಯ, ಸೋಸಲೆ ಸಿದ್ದರಾಜು ಮೊದಲಾದವರು ಇದ್ದರು.