ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿ ವಕೀಲರು ನ್ಯಾಯಾಲಯ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು, ಹಿಂದೂಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ದೌರ್ಜನ್ಯ ಖಂಡನೀಯ. ಅಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದೂಗಳ ಮನೆ, ಅಂಗಡಿ, ದೇವಸ್ಥಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಸೇನೆಯೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಬಾಂಗ್ಲಾದಲ್ಲಿರುವ ಹಿಂದೂಗಳ ಜತೆಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯ ತುಂಬಬೇಕು. ಅವರ ರಕ್ಷಣೆಯನ್ನು ಕೇಂದ್ರ ಸರ್ಕಾರ ಮಾಡಬೇಕು. ಅಲ್ಲದೆ ಬಾಂಗ್ಲಾದೇಶದ ಸರ್ಕಾರ ಹಿಂದೂಗಳ ಮೇಲಿನ ದಾಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ವಕೀಲರಾದ ಉಮೇಶ್, ಬಿ.ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.