ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸದಿರಲಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ರಾಜ್ಯ ಸರ್ಕಾರ ರಚಿಸಿರುವ ಚಾಮುಂಡಿ ಬೆಟ್ಟ ಪ್ರಾಧಿಕಾರಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಧಾರ್ಮಿಕ ಪದ್ಧತಿಗಳಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಹೀಗಾಗಿ ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂದು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಮಾಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ತಾಯಿ ಪ್ರಮೋದಾ ದೇವಿ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು.
ಕಾನೂನಾತ್ಮಕವಾಗಿ ಹೈಕೋರ್ಟ್ ಪ್ರಾಧಿಕಾರ ರಚನೆಗೆ ತಡೆ ನೀಡಿದೆ. ಈಗಾಗಲೇ ಚಾಮುಂಡಿ ಬೆಟ್ಟದ ವಿಚಾರದಲ್ಲಿ ಮುಜರಾಯಿ ಇಲಾಖೆ ವಿರುದ್ಧ ಕೇಸ್ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ.
ಇದರ ನಡುವೆ ಪ್ರಾಧಿಕಾರ ರಚನೆ ಮಾಡಿರುವುದು ಕಾನೂನಾತ್ಮಕವಲ್ಲ ಎಂದು ಹೈಕೋರ್ಟ್‍ಗೆ ನಮ್ಮ ವಕೀಲರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಬಾರಿ ನಾಡಹಬ್ಬ ದಸರಾವನ್ನು ಅದ್ಧೂರಿಯಾಗಿ ಹಾಗೂ ಜನಸಾಮಾನ್ಯರ ದಸರಾವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು ಸ್ವಾಗತಾರ್ಹ. ಇದರಿಂದ ನಗರಕ್ಕೆ ಹೆಚ್ಚು ಪ್ರವಾಸಿಗರು, ಜನರು ಆಗಮಿಸುತ್ತಾರೆ. ಇದು ನಮಗೆ ಅನುಕೂಲವಾಗುತ್ತದೆ.
ಅದೇ ರೀತಿ ಅರಮನೆಯಲ್ಲೂ ರಾಜ ಪರಂಪರೆಯ ರೀತಿ ನವರಾತ್ರಿ ನಡೆಯುತ್ತದೆ ಎಂದು ಹೇಳಿದರು.
ಸಿಎಂ ರಾಜೀನಾಮೆ ನೀಡುವುದು ಸೂಕ್ತ:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದ್ದು, ಸಿಬಿಐ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಬೇಕು.
ಅಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ ಎಂದು ಹೇಳಿದರು.
ಆ.14ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಅರಮನೆ ಸಮೀಪದ ಕಾಡಾ ಕಚೇರಿಯ ಆವರಣದಲ್ಲಿ ನೂತನ ಕಚೇರಿ ಉದ್ಘಾಟನೆ ಮಾಡಲಾಗುವುದು.
ಜನ ಸಾಮಾನ್ಯರು ತಮ್ಮ ಯಾವುದೇ ಸಮಸ್ಯೆಗಳನ್ನು ಇಲ್ಲಿಗೆ ತೆಗೆದುಕೊಂಡು ಬರಬಹುದು ಎಂದು ತಿಳಿಸಿದರು.
ದೇಗುಲ ಸಾರ್ವಜನಿಕರ ಸ್ವತ್ತು:
ಚಾಮುಂಡಿಬೆಟ್ಟದ ದೇಗುಲ ರಾಜವಂಶಸ್ಥರ ಸ್ವತ್ತಲ್ಲ, ಸಾರ್ವಜನಿಕರ ಸ್ವತ್ತು ಎಂದು ಇತಿಹಾಸ ತಜ್ಞ ಪೆÇ.ನಂಜರಾಜ ಅರಸ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ, ದೇವಿಕೆರೆ, ನಂದಿ ಸೇರಿದಂತೆ ಬೆಟ್ಟದ ಆಸುಪಾಸಿನ ಸ್ವತ್ತುಗಳು ರಾಜವಂಶಕ್ಕೆ ಸೇರಿವೆ ಎಂಬ ಪ್ರಮೋದಾದೇವಿ ಒಡೆಯರ್ ಹೇಳಿಕೆಗೆ ನಂಜನರಾಜ ಆಕ್ಷೇಪ ವ್ಯಕ್ತಪಡಿಸಿ, ಚಾಮುಂಡಿ ಬೆಟ್ಟ ಪ್ರಾಕೃತಿಕವಾಗಿ ಸೃಷ್ಟಿಯಾಗಿದೆ. ಕಾಲಾನಂತರದಲ್ಲಿ ದೇಗುಲಗಳು ನಿರ್ಮಾಣ ಆಗಿವೆ. ಚಾಮುಂಡಿ ಬೆಟ್ಟ ಎಂಬ ಹೆಸರು ಬರುವ ಮುನ್ನ ಮಹಾಬಲಗಿರಿ ಎಂದು ಕರೆಯಲಾಗುತ್ತಿತ್ತು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಚಾಮುಂಡೇಶ್ವರಿ ದೇಗುಲ ನಿರ್ಮಾಣ ಆಗಿದೆ. ಹೀಗಾಗಿ ಚಾಮುಂಡೇಶ್ವರಿ ದೇಗುಲ ಸಾರ್ವಜನಿಕರಿಗೆ ಸೇರಿದ್ದು, ಆದರೆ ದೇಗುಲ ತಮಗೆ ಸೇರಿದ್ದೆಂದು ಹೇಳಿರುವ ಪ್ರಮೋದಾದೇವಿ ಒಡೆಯರ್ ಹೇಳಿಕೆಯಲ್ಲಿ ಅರ್ಥವಿಲ್ಲ ಎಂದರು.
ಪ್ರಾಧಿಕಾರ ರಚನೆಗೆ ವಿರೋಧ:
ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಯಾವ ಉದ್ದೇಶಕ್ಕೆ ಪ್ರಾಧಿಕಾರ ರಚಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟುವುದರಿಂದ ಚಾಮುಂಡಿ ಬೆಟ್ಟದ ಅಭಿವೃದ್ಧಿ ಸಾಧ್ಯವಿಲ್ಲ. ಚಾಮುಂಡಿ ಬೆಟ್ಟದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಅಗತ್ಯವಿರಲಿಲ್ಲ.
ಬೆಟ್ಟಕ್ಕೆ ಬರುವ ಭಕ್ತಾಧಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಚಾಮುಂಡಿಬೆಟ್ಟದ ಪಾವಿತ್ಯ್ರತೆ ಕಾಪಾಡುವ ಅಗತ್ಯವಿದೆ ಎಂದು ಪೆÇ್ರ.ನಂಜರಾಜ ಅರಸ್ ತಿಳಿಸಿದರು.