ದೇಶಕ್ಕಿಂತ ಮಿಗಿಲಾದ ಸಂಗತಿ ಇನ್ನೊಂದಿಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ದೇಶ ಮೊದಲು ಎನ್ನುವುದು ನಮ್ಮ ಬದುಕಿನ ಮೌಲ್ಯವಾಗಬೇಕು. ದೇಶಕ್ಕಿಂತ ಮಿಗಿಲಾದ ಸಂಗತಿ ಇನ್ನೊಂದಿಲ್ಲ ಎಂದು ಮೈಸೂರು ಸಂಸದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಪೂರ್ಣ ಚೇತನ ಶಾಲೆಯ 1ರಿಂದ 10ನೇ ತರಗತಿಯವರೆಗಿನ ಸುಮಾರು 530 ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿ ನಡೆಸಿದ ಐದು ನಿಮಿಷಗಳ ಕವಾಯತು ಹಾಗೂ ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12 ಮೀಟರ್ 8 ಮೀಟರ್ ಅಳತೆಯ ಅತಿ ದೊಡ್ಡ ರಾಷ್ಟ್ರ ದ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸಿದರು. ಈ ವಿಶ್ವದಾಖಲೆಯ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು,
ವಿದ್ಯಾರ್ಥಿಗಳು ಪುನರ್ ಬಳಕೆಯ ಒರಿಗಾಮಿ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಬ್ಲೈಂಡ್ ಫೆÇೀಲ್ಡ್) ಐದು ನಿಮಿಷಗಳ ಕವಾಯತು ನಡೆಸಿ, ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ್ದಾರೆ. ಬಳಿಕ 2047ರಲ್ಲಿ ವಿಕಸಿತ ಭಾರತದ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಮೈಸೂರು-ಸ್ವಚ್ಛ ಭಾರತ ನಿರ್ಮಾಣದ ಸಂದೇಶ ಸಾರಿದರು. ಈ ಮೂಲಕ ಮೈಸೂರಿನಲ್ಲಿ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಶ್ರೀ ಕಾರ ಹಾಡಿದರು.
ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತದ ಕನಸನ್ನು ನಮಗೆ ನೀಡಿದ್ದಾರೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಯುವಕರ ಪಾತ್ರ ಅತಿ ಹಿರಿದಾದದ್ದು. ಮುಂದಿನ ಪ್ರಜೆಗಳಾದ ನೀವೆಲ್ಲರೂ ಈ ದೇಶಕ್ಕೆ ನಿಮಗೆ ಸಾಧ್ಯವಾದಷ್ಟು ಸೇವೆ ಸಲ್ಲಿಸಬೇಕು ಎಂದು ಯದುವೀರ್ ಕರೆ ನೀಡಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ಸ್‍ನ ತೀರ್ಪುಗಾರ್ತಿ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರ್ತಿ ಪಿ.ಜಿ.ಪ್ರತಿಭಾ ಅವರು ವಿಶ್ವ ದಾಖಲೆಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ದರ್ಶನ್ ರಾಜ್, ಈ ದೇಶದ ಭವಿಷ್ಯ ಬರೆಯಲು ಸಾಧ್ಯವಿರುವುದು ಇಂದಿನ ವಿದ್ಯಾರ್ಥಿಗಳಿಗೆ. ಅವರಲ್ಲಿ ದೇಶ ಪ್ರೇಮದ ಸಂಸ್ಕಾರ ಮೂಡಿಸುವುದು ನಮ್ಮ ಬಹು ಮುಖ್ಯ ಗುರಿ ಎಂದು ತಿಳಿಸಿದರು.
ಶಾಲೆಯ ಅಧ್ಯಕ್ಷೆ ಡಾ.ರಜನಿ.ಎಂ.ಆರ್ ಮಾತನಾಡಿ, ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ದೇಶಪ್ರೇಮದ ಭಾವವನ್ನು ಪ್ರತಿ ಮಗುವಿನಲ್ಲೂ ಬಾಲ್ಯದಲ್ಲೇ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ವಿಶ್ವದಲ್ಲೇ ಭಾರತೀಯತೆಯ ಕಲ್ಪನೆಯಂತಹ ಇನ್ನೊಂದು ಪವಿತ್ರ ಕಲ್ಪನೆ ಇಲ್ಲ. ಇಂದಿನ ವಿದ್ಯಾರ್ಥಿಗಳಲ್ಲಿ ಭಾರತೀಯತೆಯ ಸಂಸ್ಕಾರ, ಕಲ್ಪನೆ ಮೂಡಿಸಿ, ಅವರನ್ನು ದೇಶದ ಭವ್ಯ ಪ್ರಜೆಗಳಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಡೀನ್ ಲಾವಣ್ಯ, ಪ್ರಾಂಶುಪಾಲೆ ಪ್ರಿಯಾಂಕ.ಬಿ ಉಪಸ್ಥಿತರಿದ್ದರು.