ಕೆ.ಆರ್.ಆಸ್ಪತ್ರೆಗೆ ಕಪ್ಪು ಚುಕ್ಕೆ: ವೃದ್ಧೆಗೆ ಸಿಗದ ವೀಲ್ ಚೇರ್
ಸಂಜೆವಾಣಿ ನ್ಯೂಸ್
ಮೈಸೂರು: ಆ.14:- ವೃದ್ದೆಯೊಬ್ಬರಿಗೆ ವೀಲ್ ಚೇರ್ ಸಿಗದೇ ಪರದಾಡಿದ್ದನ್ನು ಕಂಡರಿತು ಸ್ಥಳಕ್ಕೆ ತೆರಳಿದ ಶಾಸಕರಿಗೂ ಸಹಃ ವೀಲ್ ಚೇರ್ ಇರುವ ಕೊಠಡಿಯ ಬೀಗ ಒಡೆದ ಘಟನೆ ನಡೆದಿದ್ದು ಕೃಷ್ಣರಾಜ ಆಸ್ಪತ್ರೆಯ ಅದ್ವಾನ ಮತ್ತೊಮ್ಮೆ ಬಯಲಾಗಿದೆ.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಅತಿದೊಡ್ಡ ಆಸ್ಪತ್ರೆಯಾಗಿರುವ, ಶತಮಾನ ಪೂರೈಸಿರುವ ಪ್ರತಿಷ್ಠಿತ ಕೆಆರ್ ಸ್ಪತ್ರೆಯಲ್ಲಿ ಸಣ್ಣ ಮೂಲಸೌಕರ್ಯವೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಈ ಆಸ್ಪತ್ರೆಗೆ ನೂರು ಕೋಟಿ ರೂಪಾಯಿ ಅನುದಾನ ಕೂಡ ನೀಡಲಾಗಿದೆ. ಇಷ್ಟಾದರೂ ವ್ಹೀಲ್ ಚೇರ್ ಇಲ್ಲದೆ ಪ್ಲಾಸ್ಟಿಕ್ ಚೇರ್ ನಲ್ಲಿ ವೃದ್ಧ ರೋಗಿಯನ್ನು ಸಂಬಂಧಿಕರು ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಇದ್ದೊಂದು ವ್ಹೀಲ್ ಚೇರ್‍ಗೆ ಸಿಬ್ಬಂದಿ ಬೀಗ ಹಾಕಿ ಕಟ್ಟಿಹಾಕಿರುವುದು ಕಂಡುಬಂದಿದೆ. ಸದ್ಯ ರೋಗಿಯನ್ನು ಪ್ಲಾಸ್ಟಿಕ್ ಚೇರ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದು, ನಾಲ್ಕು ಜಿಲ್ಲೆಗಳಿಗೆ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆಆರ್ ಆಸ್ಪತ್ರೆಗೇ ಇದೀಗ ಚಿಕಿತ್ಸೆ ಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಹರೀಶ್‍ಗೌಡ ಭೇಟಿ:
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಾಸಕ ಹರೀಶ್‍ಗೌಡ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ವ್ಹೀಲ್ ಚೇರ್ ಗೆ ಬೀಗ ಹಾಕಿರುವುದನ್ನು ಕಂಡು ಕೆಂಡಾಮಂಡಲ ಆದ ಶಾಸಕರು, `ನಿಮಗೆ ಸರ್ಕಾರದಿಂದ ಸಂಬಳ ಬರುತ್ತಿಲ್ಲವೇ ಹೊರ ಗುತ್ತಿಗೆಯವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲವೇ ಸುಮ್ಮನೆ ಸರ್ಕಾರದ ಮರ್ಯಾದೆ ಯಾಕೆ ಕಳೆಯುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಎಂದು ಮೇಲ್ವೀಚಾರಕಿ ಶೋಭಾಗೆ ತಾಕೀತು ಮಾಡಿದರು.
ಶಾಸಕರ ಭೇಟಿ ವೇಳೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್, ವ್ಹೀಲ್‍ಚೇರ್ ಸೇರಿ ಸಾಮಾಗ್ರಿಗಳಿದ್ದ ಕೊಠಡಿಗೆ ಬೀಗ ಹಾಕಿರುವುದು ಕಂಡುಬಂತು. ಶಾಸಕರು ಬಂದರೂ, ಡೀನ್ ಬಂದರೂ ಬೀಗ ಸಿಗಲಿಲ್ಲ. ಕೊನೆಗೆ ಶಾಸಕ ಹರೀಶ್‍ಗೌಡ ಬೀಗ ಹಾಕಿದ ಬಾಗಿಲು ತಳ್ಳಿ ತೆಗೆಯುವ ಯತ್ನ ಮಾಡಿದರು.
ನಂತರ ಶಾಸಕರ ಸಮ್ಮುಖದಲ್ಲೇ ಸಿಬ್ಬಂದಿ ಕಲ್ಲಿನಿಂದ ಹೊಡೆದು ಬೀಗ ಮುರಿದರು.
ಇದೇ ವೇಳೆ, ವಸ್ತುಗಳು ಹಾಳಾಗಿರುವ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಕೆಸರೆರಚಾಟ ನಡೆಯಿತು. ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಮೇಲ್ವಿಚಾರಕಿ ರಾಜೀನಾಮೆ ಕೊಡುವ ಬೆದರಿಕೆ ಹಾಕಿದರು. ಸ್ಥಳದಿಂದ ಕಣ್ಣೀರು ಹಾಕುತ್ತ ತೆರಳಿದರು. ಕೊನೆಗೆ ಶಾಸಕರು ಮನವೊಲಿಸಿದರು.
ಆರ್‍ಟಿಐ ಕಾರ್ಯಕರ್ತರಿಂದ ಬೆದರಿಕೆ ಇದೆ:
ನನಗೆ ಆರ್‍ಟಿಐ ಕಾರ್ಯಕರ್ತರಿಂಸ ಬೆದರಿಕೆ ಇದೆ. 10 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ 20 ಕ್ಕೂ ಹೆಚ್ಚು ಆರ್‍ಟಿಐ ಕಾರ್ಯಕರ್ತರು ಬಂದು ಪ್ರಶ್ನೆ ಮಾಡುತ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದಲೂ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಅವಲತ್ತು ಕೊಂಡರು.
ಇನ್ನೂ ಈ ವಿಚಾರ ಕುರಿತು ಮಾತನಾಡಿದ ಶಾಸಕ ಹರೀಶ್ ಗೌಡ, ಕೆ.ಆರ್.ಆಸ್ಪತ್ರೆಗೆ ಸೆಪ್ಟೆಂಬರ್ ನಲ್ಲಿ ಶತಮಾನೋತ್ಸ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
15 ವೀಲ್ ಚೇರ್, 14 ಬೆಡ್ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದ್ದರೂ ವೃದ್ಧರಿಗೆ ನೀಡಿದಿರುವ ನಿಜಕ್ಕೂ ಬೇಸರದ ಸಂಗತಿಯಾಗಿದೆ. ಮೇಲ್ನೋಟಕ್ಕೆ ಇದು ನಿರ್ಲಕ್ಷ್ಯ ದ ರೀತಿಯಾಗಿದೆ.
150 ಮಂದಿ ಗುತ್ತಿಗೆ ನೌಕರರಿದ್ದು, ಎನೂ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಸದರಿ ಪ್ರಕರಣವನ್ನು ಸಂಬಂಧಿಸಿದ ಸಚಿವರು ಹಾಗೂ ಸಿಎಂ ಗಮನಕ್ಕೂ ತಂದು ಬಗೆಹರಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸಮಾಡಲಾಗುವುದು ಎಂದರು.