ಸಣ್ಣ ನೀರಾವರಿ ಇಲಾಖೆ ಕಚೇರಿ ಸ್ಥಳಾಂತರ: ಮಂಜು ಖಂಡನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.14: ತಾಲ್ಲೂಕಿನ ಬೂಕನಕೆರೆಯಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ ಕಚೇರಿಯನ್ನು ಹುದ್ದೆಗಳ ಸಮೇತ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಕ್ಷೇತ್ರದ ನಾಮಂಗಲ ಕೇಂದ್ರಕ್ಕೆ ವರ್ಗಾಯಿಸಿಕೊಂಡಿರುವುದನ್ನು ಶಾಸಕ ಹೆಚ್.ಟಿ.ಮಂಜು ತೀವ್ರವಾಗಿ ಖಂಡಿಸಿದ್ದಾರೆ.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ತಮ್ಮ ಗೃಹ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಹೆಚ.ಟಿ.ಮಂಜು ಜಿಲ್ಲಾ ಉಸ್ತುವಾರಿ ಸಚಿವರ ನಡೆಯನ್ನು ಖಂಡಿಸಿದರು.
ಸಚಿವರಾದ ಆರಂಭದಲ್ಲಿ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ನಾನೆಂದೂ ಪಕ್ಷ ರಾಜಕಾರಣ ಮಾಡುವುದಿಲ್ಲ. ಸಚಿವನಾದ ನಾನು ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ದಿಗೆ ಕ್ರಮ ವಹಿಸುವುದಾಗಿ ಹೇಳಿದ್ದರು. ಈಗ ತಾವು ಆಡಿದ ಮಾತನ್ನು ಮರೆತು ಸಣ್ಣಪುಟ್ಟ ವಿಚಾರಗಳಲ್ಲೂ ಕ್ಷೇತ್ರದ ಶಾಸಕರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ನೂರಾರು ಕೆರೆಗಳಿವೆ.
ತಾಲೂಕಿನ ಕಟ್ಟಹಳ್ಳಿ, ಗೂಡೇ ಹೊಸಹಳ್ಳಿ ಮುಂತಾದ ಕಡೆ ನೂರಾರು ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗಳು ಸಣ್ಣ ನೀರಾವರಿ ಇಲಾಖೆಯ ಮೂಲಕ ನಡೆಯುತ್ತಿವೆ. ಕ್ಷೇತ್ರದ ಜನರ ಅಗತ್ಯತೆಗಳನ್ನು ಮನಗಂಡು ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2019 ರಲ್ಲಿ ಬೂಕನಕೆರೆಯನ್ನು ಕೇಂದ್ರೀಕರಿಸಿ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗ ಕಾರ್ಯಾಲಯವನ್ನು ಆರಂಭಿಸಿದ್ದರು. ತಾಲೂಕು ವ್ಯಾಪ್ತಿಯಲ್ಲಿದ್ದ ಸಣ್ಣ ನೀರಾವರಿ ಇಲಖೆಯನ್ನು ಮಂಜೂರಾತಿಯಾಗಿರುವ ಎಲ್ಲಾ ಹುದ್ದೆಗಳ ಸಮೇತ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಸ್ವ ಕ್ಷೇತ್ರ ನಾಗಮಂಗಲಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ. ಸಚಿವರ ಕ್ಷೇತ್ರಕ್ಕೆ ಸಣ್ಣ ನೀರಾವರಿ ಇಲಾಖೆಯ ಅಗತ್ಯವಿದ್ದರೆ ಅವರು ತಮ್ಮ ಕಾರ್ಯದಕ್ಷತೆ ಪ್ರದರ್ಶಿಸಿ ಮತ್ತೊಂದು ಶಾಖೆಯನ್ನು ಮಂಜೂರು ಮಾಡಿಸಿಕೊಳ್ಳಲಿ. ಅದನ್ನು ಬಿಟ್ಟು ಹಾಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯನ್ನು ನಮ್ಮ ಕ್ಷೇತ್ರದಿಂದ ಕಿತ್ತುಕೊಂಡು ತಮ್ಮ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿಕೊಳ್ಳುವುದು ಸಚಿವರ ಘನತೆ ಮತ್ತು ಗೌರವಕ್ಕೆ ತರವಲ್ಲ ಎಂದು ಕಿಡಿಕಾರಿದ ಶಾಸಕ ಹೆಚ್.ಟಿ. ಮಂಜು ಕೊಡುವ ತಾಕತ್ತಿಲ್ಲದ ರಾಜ್ಯ ಕೃಷಿ ಸಚಿವರು ಕೊಟ್ಟಿದ್ದನ್ನು ಕಿತ್ತುಕೊಳ್ಳುವ ಹೀನ ಮನಸ್ಥಿತಿಗೆ ತಲುಪಿದ್ದಾರೆ. ತಕ್ಷಣವೇ ನಮ್ಮಿಂದ ಕಿತ್ತುಕೊಳ್ಳಲು ಆದೇಶ ಹೊರಡಿಸಿರುವ ಸಣ್ಣ ನೀರಾವರಿ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾಲೂಕಿನ ರೈತರ ಹಿತ ದೃಷ್ಠಿಯಿಂದ ನಾನು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ಮಂಡ್ಯ ಜಿಲ್ಲೆಯಲ್ಲೆ ಏಕೈಕ ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣಕ್ಕೆ ಮುಂದಾಗಿರುವ ಸಚಿವ ಎನ್.ಚಲುವರಾಯಸ್ವಾಮಿ ನನ್ನ ಕ್ಷೇತ್ರದಲ್ಲಿ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಸಣ್ಣ ಪುಟ್ಟ ವಿಚಾರದಲ್ಲೂ ಅಡ್ಡಗಾಲು ಹಾಕಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸದೆ ಹಲವು ಬಾರಿ ನನ್ನ ಶಾಸಕ ಸ್ಥಾನಕ್ಕೂ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಯಾರಿಗೂ ಅಧಿಕಾರ ಶಾಶ್ವತಲ್ಲ ಅವರು ಕೂಡ ವಿರೋಧ ಪಕ್ಷದಲ್ಲಿ ಶಾಸಕರಾಗಿದ್ದೆ ಎನ್ನುವ ಮನಸ್ಸಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸಿ ಕಾರ್ಯನಿರ್ವಹಿಸಬೇಕು ಎಂದು ಪರೋಕ್ಷವಾಗಿ ಗುಡುಗಿದರು.
ಕೃತಜ್ಞತೆ: ರಾಜ್ಯ ಸರ್ಕರದ ವಾಲ್ಮೀಕಿ ನಿಗಮದ ಅವ್ಯವಹಾರ, ಮುಖ್ಯಮಂತ್ರಿಗಳ ಮೂಡಾ ಹಗರಣಗಳ ವಿರುದ್ದ ಜೆಡಿಎಸ್ ಮತ್ತು ಬಿಜೆಪಿ ಸಂಯುಕ್ತವಾಗಿ ನಡೆಸಿದ ಪಾದ ಯಾತ್ರೆಯ ಹೋರಾಟದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣಕರ್ತರಾದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಶಾಸಕರು ಇದೇ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಅರ್ಪಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾ.ಪಂ ಮಾಜಿ ಸದಸ್ಯರಾದ ಹುಲ್ಲೆಗೌಡ, ಹೊಸಹೊಳಲು ರಾಜು, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಶ್ಯಾಮಣ್ಣ, ಚಟ್ಟೇನಹಳ್ಳಿ ನಾಗರಾಜು ಸುದ್ದಿಗೋಷ್ಠಿಯಲ್ಲಿದ್ದರು.