ರೆಕಾರ್ಡ್ ರೂಮಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.14: ಪಟ್ಟಣದ ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ನಡೆಯುತ್ತಿರುವ ರೈತರ ಶೋಷಣೆಯನ್ನು ನಿಲ್ಲಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ತಾಲೂಕು ರೈತಸಂಘದ ಅಧ್ಯಕ್ಷ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಶಿರಸ್ತೆದಾರರ ಕಛೇರಿಗೆ ಆಗಮಿಸಿದ ರೈತ ಮುಖಂಡರು ರೆಕಾರ್ಡ್ ರೂಂ ನಲ್ಲಿ ನಡೆಯತ್ತಿರುವ ರೈತರ ಶೋಷಣೆಯನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ರೈತರು ಪಡೆಯುವ ದಾಖಲಾತಿಗಳಿಗೆ ರೆಕಾರ್ಡ್ ರೂಂ ಸಿಬ್ಬಂದಿಗಳು ಮನಸೋ ಇಚ್ಚೆ ಹಣ ವಸೂಲಿ ಮಾಡುತ್ತಿದ್ದಾರೆ. ದಾಖಲಾತಿ ಪಡೆಯಲು ರೈತರು ನೀಡಬೇಕಾದ ಶುಲ್ಕದ ವಿವರಗಳನ್ನು ಕಛೇರಿಯ ಮುಂದೆ ನಾಮಫಲಕದ ಮೂಲಕ ಪ್ರದರ್ಶಿಸಬೇಕು. ರೈತರಿಂದ ಪಡೆದ ಪ್ರತಿಯೊಂದು ರೂಪಾಯಿಗೂ ಅಗತ್ಯ ರಸೀದಿ ನೀಡುವಂತೆ ರೈತಸಂಘ ಹತ್ತು ಹಲವು ಸಲ ಮನವಿ ಮಾಡಿದ್ದರೂ ಕಂದಾಯ ಇಲಾಖೆ ಮಾತ್ರ ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ. ರೆಕಾರ್ಡ್ ರೂಂನಲ್ಲಿ ಸಿಬ್ಬಂಧಿಗಳ ಬದಲು ದಳ್ಳಾಳಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ರೆಕಾರ್ಡ್ ರೂಂ ತಾಲೂಕು ಆಡಳಿತಸೌಧದ ನೆಲಮಾಳಿಗೆಯಲ್ಲಿದ್ದು ಸರಿಯಾದ ಬೆಳಕಿನ ವ್ಯವಸ್ತೆಯಿಲ್ಲ. ರೈತರು ದಾಖಲಾತಿ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳಕ್ಕೆ ವಿದ್ಯುತ್ ದೀಪ ಹಾಕುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಅದರ ಬಗ್ಗೆ ಕ್ರಮ ವಹಿಸುತ್ತಿಲ್ಲ. ಮಳೆ ಬಂದರೆ ನೆಲ ಮಾಳಿಗೆ ಸೋರುತ್ತದೆ. ಮಳೆಗಾಲದಲ್ಲಿ ಸೋರುತ್ತಿರುವ ನೀರಿನ ನಡುವೆಯೇ ರೈತರು ದಾಖಲಾತಿಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ರೆಕಾರ್ಡ್ ರೂಂ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲಿ ನಡೆಯುತ್ತಿರುವ ರೈತರ ಶೋಷಣೆ ನಿಲ್ಲಬೇಕು. ಪ್ರತಿಯೊಂದು ದಾಖಲೆಗೆ ರೈತರು ಪಾವತಿಸಬೇಕಾದ ಶುಲ್ಕವನ್ನು ನಾಮಫಲಕದ ಮೂಲಕ ಬಹಿರಂಗವಾಗಿ ಪ್ರದರ್ಶಿಸಬೇಕು ಮತ್ತು ರೈತರಿಂದ ಪಡೆದ ಪ್ರತಿಯೊಂದು ನಯಾಪೈಸೆಗೂ ರಸೀದಿ ಹಾಕುವಂತೆ ರೈತರು ಒತ್ತಾಯಿಸಿದರು.
ರೈತರ ಅಹವಾಲುಗಳನ್ನು ಆಲಿಸಿದ ಶಿರಸ್ತೆದಾರ್ ರವಿ ನನ್ನ ಕಚೇರಿಗೆ ನಿತ್ಯ ನೂರಾರು ಫೈಲುಗಳು ಬರುತ್ತವೆ. ಎಲ್ಲವನ್ನೂ ನೋಡಿ ಸಹಿ ಹಾಕಲು ನನಗೆ ಸಮಯ ಸಾಕಾಗುತ್ತಿಲ್ಲ. ನನ್ನ ಬಳಿ ಫೈಲುಗಳು ಪೆಂಡಿಂಗ್ ಆಗುತ್ತಿವೆ ಎನ್ನುವ ಸುಳ್ಳು ಆರೋಪ ಮಾಡಿ ಕೆಲವರು ನನ್ನನ್ನು ಅಮಾನತ್ತು ಮಾಡಿಸಿದ್ದರು. ಇದೀಗ ಮತ್ತೆ ಸೇವೆಗೆ ಬಂದಿದ್ದೇನೆ. ಹಳೆಯ ರಸೀದಿ ಪುಸ್ತಕಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ರೆಕಾರ್ಡ್ ರೂಂ ನಿಂದ ಬರುವ ಎಲ್ಲಾ ದಾಖಲಾತಿ ರಸೀದಿಗಳನ್ನು ಪರಿಶೀಲಿಸಿ ಸಹಿ ಮಾಡುತ್ತೇನೆ. ರೈತರ ಶೋಷಣೆಯಾಗದಂತೆ ಶುಲ್ಕ ವಿವರದ ನಾಮ ಫಲಕ ಹಾಕಿಸುವ ಭರವಸೆ ನೀಡಿದರು. ರೈತರು ಸಿಬ್ಬಂಧಿಗಳು ಕೇಳಿದಷ್ಟು ಶುಲ್ಕ ನೀಡದೆ ನಿಯಮಾನುಸಾರ ಶುಲ್ಕ ಪಾವತಿಸಿ ತಾವು ಪಾವತಿಸಿದ ಹಣಕ್ಕೆ ಕಡ್ಡಾಯವಾಗಿ ಕೇಳಿ ರಸೀದಿ ಪಡೆಯುವಂತೆ ಸೂಚಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಮುಖಂಡರಾದ ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ನೀತಿಮಂಗಲ ಮಹೇಶ್, ಮರಡಹಳ್ಳಿ ರಾಮೇಗೌಡ ಸೇರಿದಂತೆ ಹಲವರಿದ್ದರು.