ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.14- ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಕ್ರಿಪ್ರಕ್ರಾಂತಿಯ ನೆಪದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಬಾಂಗ್ಲಾದೇಶದ ಮುಸ್ಲಿಮರು ಹಲ್ಲೆ ಮಾಡಿ, ಪ್ರಾಣ ಹಾನಿ, ಆಸ್ತಿ ಪಾಸ್ತಿಗಳ ಹಾನಿ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ಬಾಂಗ್ಲಾದಲ್ಲಿ ಹಿಂದುಗಳ ರಕ್ಷಣೆಗೆ ಒತ್ತಾಯಿಸಿ ನಗರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಹಿಂದು ಹಿತರಕ್ಷಣಾ ಸಮಿತಿಯ ಶ್ರೀಕಂಠ ಹಾಗೂ ವಿರಾಟ್ ಶಿವು ನೇತೃತ್ವದಲ್ಲಿ ಸಮಾವೇಶಗೊಂಡು ಹಿಂದು ಪರಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾಯಂಕಾಲ ಮೆರವಣಿಗೆಯಲ್ಲಿ ಹೊರಟರು. ಬಾಂಗ್ಲಾದೇಶ ವಿರುದ್ದ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು. ನಿಲ್ಲಲಿ ನಿಲ್ಲಲಿ ಹಿಂದುಗಳ ಮೇಲಿನ ದಬ್ಬಾಳಿಕೆ ದೌರ್ಜನ್ಯ ನಿಲ್ಲಲಿ ಎಂಬ ಘೊಷಣೆಗಳನ್ನು ಕೂಗಿದರು. ಶ್ರೀ ಭುವನೇಶ್ವರ ವೃತ್ತ ತಲುಪಿ, ಕೆಲ ಕಾಲ ಮಾನವ ಸರಪಳಿ ನಿರ್ಮಾಣ ಮಾಡಿ, ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ವಿರಾಟ್ ಶಿವು, ಬಾಂಗ್ಲಾದೇಶದಲ್ಲಿ ರಾಜಕೀಯ ಹರಾಜಕತೆಯ ನೆಪದಲ್ಲಿ ಅಲ್ಪ ಸಂಖ್ಯಾತ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಲಿನ ಬಹುಸಂಖ್ಯಾತ ಮುಸ್ಲಿಮರು ಹಿಂದುಗಳ ಮನೆಗಳನ್ನು ಟಾರ್ಗಟ್ ಮಾಡಿ ನಿರಂತರ ದಾಳಿ ನಡೆಯುತ್ತಿದೆ. ಹಿಂದು ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ಮಾಡುತ್ತಿದ್ದು, ಅಲ್ಲಿನ ಮುಸ್ಲಿಂ ಹೆಣ್ಣು ಮಕ್ಕಳೇ ಹಿಂದು ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ಸಹೋದರರೇ ನಾವು ಇದ್ದೇವೆ ಎಂದು ಹೇಳುವುದು ಒಂದು ಕಡೆಯಾದರೆ, ಅವರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಕೃತ್ಯಗಳು ನಡೆಯುತ್ತಿದೆ. ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ದಾಳಿಗಳು ನಡೆದರೆ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರು ಎಂಬುವುದನ್ನು ಅಲ್ಲಿನ ಬಾಂಗ್ಲಾ ಮುಸ್ಮಿಮರು ಅರ್ಥ ಮಾಡಿಕೊಂಡರೆ ಒಳಿತು. ಇದೇ ರೀತಿ ದಾಳಿ ಮುಂದುವರಿದರೆ, ಭಾರತದಲ್ಲಿರು ಶೇ. 80 ರಷ್ಟು ಹಿಂದುಗಳು ತಿರುಗಿ ಬಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಭಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸೆ ಬಗ್ಗೆ ವಿಶ್ವ ಸಂಸ್ಥೆಗೆ ಪತ್ರ ಬರೆದು, ಹಿಂದುಗಳ ರಕ್ಷಣೆಗೆ ಮುಂದಾಗಬೇಕು ಎಂದು ಶಿವು ವಿರಾಟ್ ಒತ್ತಾಯಿಸಿದರು.
ಭಾರತದಲ್ಲಿ ಪೌರತ್ವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ, ದೌರ್ಜನ್ಯಗೊಳಗಾಗುತ್ತಿರುವ ಹಿಂದುಗಳಿಗೆ ಪೌರತ್ವ ನೀಡಲು ಜಾರಿ ಮಾಡಿರುವ ಕಾಯ್ದೆಯನ್ನು ಜಾರಿ ಮಾಡಬೇಕು. ಹಿಂದುಗಳ ರಕ್ಷಣೆಗೆ ಪ್ರಧಾನಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್, ರಾ. ಸತೀಶ್, ಚಿಕ್ಕರಾಜು, ಚುಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ಹೌಸಿಂಗ್ ಬೋರ್ಡ್ ರಾಜು, ಮಧು, ಸುಂದರ್‍ರಾಜು, ಕೃಷ್ಣಪ್ಪ, ಶ್ರೀಕಂಠ, ಮಾರ್ಕೆಟ್ ಕುಮಾರ್, ಉತ್ತುವಳ್ಳಿ ಮಹೇಶ್, ಶ್ರೀಕಾಂತ್, ಕೂಸಣ್ಣ, ನವೀನ್, ಸೂರ್ಯಕುಮಾರ್, ಬಂಗಾರು, ಬುಲೆಟ್ ಚಂದ್ರು, ರವಿ, ಕುಮಾರ್, ರಾಜು, ಮಂಜುನಾಥ್, ಬಾಬು, ಪ್ರದೀಪ್, ಮಧುಸೂಧನ್, ರಮೇಶ್, ಮಣಿಕಂಠ, ಚಂದ್ರು, ರುದ್ರ ಮೊದಲಾದವರು ಇದ್ದರು.