ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ : ಮಳೆನೋರ್
ಸಂಜೆವಾಣಿ ವಾರ್ತೆ
ಔರಾದ್ : ಆ.೧೪:ಎಲ್ಲ ಮಕ್ಕಳಲ್ಲೂ ವಿಶೇಷ ವಾದ ಪ್ರತಿಭೆ ಅಡಗಿದ್ದು ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡ ಬೇಕು, ಕಾಲಕಾಲಕ್ಕೆ ತಕ್ಕಂತೆ ಅಗತ್ಯ ಮಾರ್ಗದರ್ಶನದ ದೊರೆತಲ್ಲಿ ಮಕ್ಕಳ ಪ್ರತಿಭೆ ಅನಾವರಣ ಆಗಲು ಸಾಧ್ಯ ಎಂದು ಆದರ್ಶ ವಿದ್ಯಾಲಯ ಪ್ರಾಚಾರ್ಯ ಧೂಳಪ್ಪ ಮಳೆನೋರ್ ಹೇಳಿದರು.
ಪಟ್ಟಣದ ನವಚೇತನ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಸಹಯೋಗದಲ್ಲಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನ ಅವಶ್ಯ. ಸೂಕ್ತ ಮಾರ್ಗದರ್ಶನ ನೀಡಿದರೆ ಆ ಪ್ರತಿಭೆಗಳು ಇನ್ನೂ ಉನ್ನತ ಸಾಧನೆ ಮಾಡಬಲ್ಲರು, ಆ ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗೆ ಶಿಕ್ಷಕರು, ಪಾಲಕ ಪೋಷಕರು ನೀರೆರೆದು ಪೋಷಿಸಿದಾಗ ಸಾಧನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಕಾಸ ಅಕಾಡೆಮಿ ಸಂಚಾಲಕ ಗುರುನಾಥ ವಟಗೆ, ರಾಜಕುಮಾರ ಡೊಂಗರೆ, ಪ್ರಶಾಂತ ಶಿಂಧೆ, ಪಿಎಸ್‌ಐ ವಾಸೀಂ ಪಟೇಲ್, ರಜನಿಗಂಧಾ, ಮಹಾದೇವ ಚಿಟಗೀರೆ, ನಾಗನಾಥ ಶಂಕು, ಸೂರ್ಯಕಾಂತ ಬಿರಾದಾರ, ಇಂದುಮತಿ ಎಡವೆ, ಸಂಜೀವ ಶಟಕಾರ, ಜಗದೇವಿ ಸೇರಿದಂತೆ ಇನ್ನಿತರರಿದ್ದರು.