ಭಾರತ ಆರ್ಥಿಕ ಶಕ್ತಿಯಾಗುವಲ್ಲಿ ಸಾಂಸ್ಕೃತಿಕ ಶಕ್ತಿ ಮರೆಯಬಾರದು
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.14. ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲುತ್ತಿರುವ ನಮ್ಮ ಭಾರತವು ನಾವು ವಿಶ್ವದ ದೊಡ್ಡ ಸಾಂಸ್ಕೃತಿಕ ಶಕ್ತಿಯೂ ಆಗಿದ್ದೇವೆ ಎಂಬುದನ್ನು ಮರೆಯಬಾರದು, ಇದನ್ನು ಬೆಳೆಸಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು. ಅವರಿಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ  ವಿದ್ಯಾರ್ಥಿಕೂಟ ಸಮರೋಪ ಸಮಾರಂಭ ಹಾಗೂ  ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಫರ್ಧಾ  ವಿಜೇತರುಗಳಿಗೆ ಬಹುಮಾನ ವಿತರಣೆ  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಆರ್ಥಿಕ ಶಕ್ತಿಯಾಗಲು ಬುದ್ಧಿ ಬಲಬೇಕು,  ಕ್ರೀಡಾ ಶಕ್ತಿಯಾಗಲು ದೇಹ ಬಲಬೇಕು, ಸಾಂಸ್ಕೃತಿಕ ಶಕ್ತಿಯಾಗಲು ಮನೋಬಲಬೇಕು, ಬುದ್ಧಿ ಬಲ ಹಾಗೂ ದೇಹ ಬಲಕ್ಕೆ ಪ್ರತಿಸ್ಪರ್ಧಿಗಳಿದ್ದರೆ ಮನೋಬಲಕ್ಕೆ ಪ್ರತಿಸ್ಪರ್ಧಿಗಳಿರುವುದಿಲ್ಲ ಆದ್ದರಿಂದ ಅಸೂಯೆಯೂ ಇರುವುದಿಲ್ಲ. ಪದವಿಯಿಂದ ಉದ್ಯೋಗ ಪಡೆ ಪಡೆಯಬಹುದು ಆದರೆ ಉತ್ಸಾಹ ಪಡೆಯಲು ಸಾಂಸ್ಕೃತಿಕ ಅಭಿರುಚಿ ಬೇಕು ಸಂಪಾದನೆಯಿಂದ ಸಂತೋಷ ಪಡೆಯಬಹುದು ಆದರೆ ಸಂಸ್ಕೃತಿಯಿಂದ ಆನಂದ ಪಡೆಯಬಹುದಾಗಿದೆ, ಸಂತೋಷಕ್ಕೆ ದುಃಖವೆಂಬ ವಿರೋಧ ಪದವಿದೆ ಆದರೆ ಆನಂದವೆಂಬ ಪದಕ್ಕೆ ವಿರೋಧ ಪದವೇ ಇಲ್ಲ ಎಂದರಲ್ಲದೆ ಭಾಗವಹಿಸುವಿಕೆ ಮುಖ್ಯ ಬಹುಮಾನವಲ್ಲ ಎಂಬ ಮಾತನ್ನು ದೂರವಿಟ್ಟು ಬಹುಮಾನವೂ ಮುಖ್ಯ ಎಂದು ತಿಳಿದಾಗಲೇ ನಾವು ಮುಂದಿನ ಒಲಂಪಿಕ್ ನಲ್ಲಿ ಚಿನ್ನದ ಪದಕಗಳನ್ನು ಪಡೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ  ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಬಿ ಡಿ ಕುಂಬಾರರವರು ಜೀವನದಲ್ಲಿ ಸಾಧನೆ ಮಾಡಲು ಭೌತಿಕ ಬೌದ್ಧಿಕವಾಗಿ ಸಮರ್ಥರಾದರೆ ಸಾಲದು ಮಾನಸಿಕವಾಗಿಯೂ ಸದೃಢತೆ ಬೇಕು, ಇದಕ್ಕಾಗಿ ಆಟ ಪಾಠ ಸಂಗೀತ ಸಂಸ್ಕೃತಿ ಈ ನಾಲ್ಕೂ ಮುಖ್ಯ, ವಿಭಿನ್ನ ತರಗತಿಗಳ ಮತ್ತು ವಿಷಯಗಳ ವಿದ್ಯಾರ್ಥಿಗಳು ಕೂಡಿ ಭಾಗವಹಿಸಲು, ಪರಸ್ಪರ ಸ್ನೇಹ ವೃದ್ಧಿಸಲು ಇಂತಹ ಸ್ಪರ್ಧೆಗಳು ಅನುಕೂಲಕರ ಎಂದರು.   ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಶಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಯೋಗ ವಿಜ್ಞಾನ ವಿಭಾಗದ ಸಂವೇದಿತ ಪ್ರಾರ್ಥನೆ ಹಾಡಿದರು. ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ. ಜೋಗಿನಕಟ್ಟೆ ಮಂಜುನಾಥ ಸ್ವಾಗತ ಕೋರಿದರು. ಸ್ನಾತಕೋತ್ತರ ವಿದ್ಯಾರ್ಥಿಕೂಟದ ಅಧ್ಯಕ್ಷ ಪ್ರೊ.ರವಿ ಕುಮಾರ್ ಪಾಟೀಲ್ ಎಚ್ಎಸ್ ಪ್ರಸ್ತಾವಿಕ ನುಡಿಗಳ ನಾಡಿದರು. ಪ್ರಧಾನ ಕಾರ್ಯದರ್ಶಿ ಕು.ಪವಿತ್ರ ಉಪಸ್ಥಿತರಿದ್ದರು. ಸಾಂಸ್ಕೃತಿಕ ವಿಭಾಗದ ಉಪಾಧ್ಯಕ್ಷೆ ಡಾ. ಶಶಿಕಲಾ ಯಾಳಗಿ ವಂದನೆ ಸಮರ್ಪಿಸಿದರು.