ಸಹಕಾರ ಭವನ”ದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರಿಗಳು ಕೈ ಜೋಡಿಸಬೇಕು

ದಾವಣಗೆರೆ, ಆ.13; ದಾವಣಗೆರೆ ಜಿಲ್ಲೆಯಲ್ಲಿ ನೂತನ “ಸಹಕಾರ ಭವನ”ದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ಸಹಕಾರಿಗಳು ಕೈ ಜೋಡಿಸ ಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಕರೆ ನೀಡಿದರು.ನಗರದ ಸದ್ಯೋಜಾತ ಹಿರೇಮಠದಲ್ಲಿ ಸೋಮವಾರ ಜಿಲ್ಲಾ ಸಹಕಾರ ಯೂನಿಯನ್‌ನ 2023-24 ನೇ ಸಾಲಿನ 21ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಸುಗಮ ಕಾರ್ಯ ನಿರ್ವಹಣೆಗೆ ಉತ್ತಮ ತರಬೇತಿಯ ಅಗತ್ಯವಿದೆ ಎಂರದು.ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಒಕ್ಕೂಟದಿಂದ ಕಾಲಕಾಲಕ್ಕೆ ಸಹಕಾರ ಸಂಘಗಳು ಅಳವಡಿಸಿ ಕೊಳ್ಳಬೇಕಾದ ವಿಷಯಗಳ ಕುರಿತು ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿಗೆ ತರಬೇತಿ ನೀಡುತ್ತಾ ಬರುತ್ತಿದೆ. ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಒಕ್ಕೂಟದಲ್ಲಿ ಸದಸ್ಯತ್ವ ಪಡೆಯುವುದರ ಮೂಲಕ ಒಕ್ಕೂಟವು ಸ್ವಂತ ಕಟ್ಟಡ “ಸಹಕಾರ ಭವನ” ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಪ್ರಾರಂಭಗೊಂಡು 21 ವರ್ಷವಾ ಗುತ್ತಿದೆ. ಈ ಅವಧಿಯಲ್ಲಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಮಾತೃ ಸಂಸ್ಥೆಯಾಗಿ ಸಹಕಾರ ಯೂನಿಯನ್ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗೆ ಸ್ವಂತ ಕಟ್ಟಡ ಸಹಕಾರ ಭವನ ನಿರ್ಮಾಣ ಮಾಡಲು ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದರು. ಜಿಲ್ಲೆಯ ಎಲ್ಲಾ ಸಹಕಾರಿಗಳು ಸ್ವಂತ ಕಟ್ಟಡವನ್ನು ಸಂಸ್ಥೆಯು ಹೊಂದಲು ಸಹಕಾರ ನೀಡಬೇಕು. ಇದಕ್ಕಾಗಿ ಜಿಲ್ಲೆಯ ಸಮಸ್ತ ಸಹಕಾರಿಗಳು, ಎಲ್ಲಾ ವಿಧದ ಸಹಕಾರ ಸಂಘಗಳು, ಬ್ಯಾಂಕ್‌ಗಳು ಮಾರ್ಗದರ್ಶನ ಹಾಗೂ ಧನಸಹಾಯ ಮಾಡಬೇಕು. ಸಹಕಾರ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ರವರ ಆಡಳಿತ ಮಂಡಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದೂಡಾದಿಂದ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.ಒಕ್ಕೂಟದ ಉಪಾಧ್ಯಕ್ಷ ಬೇತೂರು ಟಿ.ರಾಜಣ್ಣ, ನಿರ್ದೇಶಕರಾದಎಸ್.ಬಿ.ಶಿವಕುಮಾರ, ಆರ್.ಜಿ.ಶ್ರೀನಿವಾಸ ಮೂರ್ತಿ, ಡಿಎಂ ಮುರುಗೇಂದ್ರಯ್ಯ, ಕೆ.ಜಿ.ಸುರೇಶ,ಎಸ್.ಜಿ.ಪರಮೇಶ್ವರಪ್ಪ, ಅನ್ನಪೂರ್ಣ, ಡಿ.ಶಿವಗಂಗಮ್ಮ, ವೃತ್ತಿ ಪರ ನಿರ್ದೇಶಕರಾದ ಎಂ.ವಿ.ರಾಜ್, ಎನ್.ಎಂ. ಹಾಲಸ್ವಾಮಿ, ಕೆ.ಜಿ.ಸುರೇಶ ಇತರರು ಇದ್ದರು.