ನಿವೇಶನಕ್ಕಾಗಿ ಬಾತಿಗುಡ್ಡದ ಪರಿಸರ ನಾಶ ಮಾಡದಿರಲು ಪರಿಸರ ಪ್ರೇಮಿಗಳ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೩; ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಕಸಬಾ ಹೋಬಳಿ  ಸರ್ವೆ ನಂ 240 ರ ಹತ್ತಿರ ಸ ನಂ 300 ರಲ್ಲಿ 5 ಎಕರೆ ಹಾಗೂ ಸ ನಂ 301 ರಲ್ಲಿ 1 ಎಕರೆ ಜಮೀನನ್ನು ನಿವೇಶನ ಮಾಡಿ ಬಡಜನರಿಗೆ ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತ ಆದೇಶಿಸಿದೆ ಆದರೆ ಇದರಿಂದ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಎಕೈಕ ಗುಡ್ಡದ ಪರಿಸರ ಸಂಪೂರ್ಣ ಹಾಳಾಗುತ್ತದೆ ಎಂದು ಸಾಮಾಜಿಕ‌  ಕಾರ್ಯಕರ್ತ ಎಂ.ಜಿ ಶ್ರೀಕಾಂತ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡವರಿಗೆ ನಿವೇಶನ ಮಂಜೂರು ಮಾಡಲು ೨೦೨೪ ರಫೆಬ್ರವರಿ ೧೩  ರಂದು ದಾವಣಗೆರೆ ದೊಡ್ಡಬಾತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ದಾವಣಗೆರೆ ತಹಶೀಲ್ದಾರ್ ರವರಿಗೆ ಪತ್ರ ಬರೆದಿದ್ದಾರೆ.ಅವರ ಪತ್ರದಂತೆ ದಾವಣಗೆರೆ ವಲಯ ಅರಣ್ಯಾಧಿಕಾರಿಗಳು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಭೂಮಾಪನ ಇಲಾಖೆಗೆ ಪತ್ರ ಬರೆದಿದ್ದಾರೆ, ಆದರೆ ಹಾಲಿ ಸದರಿ ಸರ್ವೆ ನಂ ನಲ್ಲಿ ಸುಮಾರು 30 ವರ್ಷಗಳ ಮರ ಗಿಡಗಳಿವೆ ವಿವಿಧ ಪ್ರಭೇದ ಪಕ್ಷಿ ಸಂಕುಲ ಸಹ ವಾಸವಾಗಿವೆ,ಸದರಿ ಸರ್ಕಾರಿ ಜಾಗವನ್ನು ಬಡವರಿಗೆ ನಿವೇಶನ ಮಾಡಲು ಮಂಜೂರು ಮಾಡಿದರೆ ಮರಗಳನ್ನು ಕಡಿದು ಹಾಗೂ ಮಣ್ಣು ತೆಗೆಯುವುದರಿಂದ ಗುಡ್ಡ ಕುಸಿಯುತ್ತದೆ ಅಲ್ಲದೇ ನಮ್ಮ ದಾವಣಗೆರೆ ನಗರಕ್ಕೆ ಹೊಂದಿಕೊಂಡಿರುವ ಎಕೈಕ ಗುಡ್ಡದ ಪರಿಸರ ಸಂಪೂರ್ಣ ಹಾಳಾಗುತ್ತದೆ,ಯಾವುದೇ ಕಾರಣಕ್ಕೂ ಸಹ ಹಾಲಿ ಇರುವ ಮರಗಳನ್ನು ಕಡಿಯಬಾರದು ಎಂದು ಒತ್ತಾಯಿಸಿದರು.ಅಲ್ಲದೇ ಅರಣ್ಯ ಇಲಾಖೆ ವರದಿ ನೀಡುವಾಗ ಮರಗಳನ್ನು ಉಳಿಸುವ ಬಗ್ಗೆ ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ಈ ಪ್ರದೇಶದಲ್ಲಿ ಎಷ್ಟು ಜಾತಿಯ ಮರಗಳಿವೆ ಎಂದು ಅಂಕಿ ಅಂಶ ನೀಡಿಲ್ಲಾ ಅಲ್ಲದೇ ಸರ್ಕಾರಕ್ಕೆ ಈ ಜಾಗದಲ್ಲಿ ಗಿಡ ಮರಗಳಿವೆ ಇದನ್ನು ನಮ್ಮ ಇಲಾಖೆಗೆ ನೀಡಿ ಎಂದು ಪತ್ರ ಸಹ ಬರೆದಿಲ್ಲಾ ಏಕಾಏಕಿ ಇಷ್ಟೊಂದು ಮರಗಳನ್ನು ಕಡಿಯಲು ಕಾರಣವೇನು  ಇದರ ಹಿಂದೆ ಭೂ ಮಾಫಿಯಾ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.ಇದರ ಬಗ್ಗೆ ಈಗಾಗಲೆ  ಮುಖ್ಯ ಮಂತ್ರಿಗಳು,ಕಂದಾಯ ಸಚಿವರು,ಮುಖ್ಯ ಕಾರ್ಯದರ್ಶಿಗಳಿಗೆ, ಅರಣ್ಯ ಸಚಿವರ ಕಛೇರಿಗೆ ಈ ಮೇಲ್ ಮಾಡಲಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ  ಅವರಿಗೂ ಮನವಿ ಮಾಡಲಾಗಿದೆ. ಸದರಿ ಗುಡ್ಡ ಕುಸಿದರೆ ನೆರೆ ರಾಜ್ಯದಲ್ಲಿ ಆದಂತೆ ನಮ್ಮ ದಾವಣಗೆರೆ ಜಿಲ್ಲೆಯಲ್ಲೂ ಸಹ ಆಗಬಹುದು.ಜಿಲ್ಲೆಯ ಯಾವ ಭಾಗದಲ್ಲಾದರೂ ಸಹ ಸರ್ಕಾರಿ ಜಾಗದಲ್ಲಿ ಬೆಳೆದ ಮರ ಗಿಡಗಳಿದ್ದರೆ ರಾಜ್ಯ ಸರ್ಕಾರ ಅವುಗಳ ಸರ್ವೆ ಮಾಡಿಸಿ ಪರಿಸರ ಸಂರಕ್ಷಣೆ ಮಾಡಿ,ಜೀವ ಸಂಕುಲದ ಉಳಿವಿಗೆ ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ‌ ಕೆ.ಟಿ.ಗೋಪಾಲ ಗೌಡ,  ಎಸ್.ಗಿರೀಶ್ ದೇವರಮನಿ, ಕೆ.ಎನ್. ರವಿಕುಮಾರ್, ಇ.ಬಸವರಾಜ್, ಶ್ರೀನಿವಾಸ್ ಇದ್ದರು.