7ನೇ ದಿನದ ಯುವಸಂಭ್ರಮದಲ್ಲಿ ನೃತ್ಯ ಸೊಬಗನ್ನು ಕಣ್ತುಂಬಿಕೊಂಡ ಯುವಸಮೂಹ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮದ 7ನೇ ದಿನದಂದು ನೃತ್ಯ ಸೊಬಗನ್ನು ಯುವಸಮೂಹ ಕಣ್ತುಂಬಿಕೊಂಡಿತ್ತು.
ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಜೆ ಎಸ್ ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಲಾತಂಡದವರು ಮಾಡಿದ ಮಹಿಷ ಮರ್ದಿನಿ ನೃತ್ಯ ಪ್ರದರ್ಶನವೂ ಜನರ ಗಮನ ಸೆಳೆಯಿತು, ಹೆಚ್ ಡಿ ಕೋಟೆ ತಾಲ್ಲೂಕಿನ ವಿದ್ಯಾ ಸಿಂಚನ ಪದವಿ ಪೂರ್ವ ಕಾಲೇಜು ತಂಡದವರು ಕರ್ನಾಟಕ ಜಾನಪದ ವೈವಿಧ್ಯತೆಯ ಕುರಿತು ನೃತ್ಯವನ್ನು ಪ್ರದರ್ಶಿಸಿದರು, ಕೆ ಆರ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡದವರು ಮಾಡಿದ ನೃತ್ಯ ಪ್ರದರ್ಶನವೂ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು,
ಮೈಸೂರಿನ ಡಿ ಪೌಲ್ ಕಾಲೇಜು ತಂಡದವರ ನವದುರ್ಗಿ ನವವೈಭವ ನೃತ್ಯ ಪ್ರದರ್ಶನವನ್ನು ಜನರು ಕಣ್ ತುಂಬಿಕೊಂಡರು, ಯರಗನಹಳ್ಳಿಯ ನಿತ್ಯ ನಿರಂತರ ಟ್ರಸ್ಟ್ ತಂಡದವರು ಮಾಡಿದ ಶಿವ ತಾಂಡವ ನೃತ್ಯ ಪ್ರದರ್ಶನವು ಜನರ ಶಿಳ್ಳೆ ಚಪಾಳೆಯನ್ನು ಗಿಟಿಸಿಕೊಂಡಿತು, ಬೆಂಗಳೂರಿನ ವಿವಿಎನ್ ಪದವಿ ಪೂರ್ವ ಕಾಲೇಜಿನ ತಂಡದವರು ಸಾಧನೆಗೈದ ಮಹಿಳೆಯರಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವನಕೆ ಒಬ್ಬವ ಅವರ ಕುರಿತಾದ ನೃತ್ಯವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ 57 ನೃತ್ಯ ಪ್ರದರ್ಶನಗಳನು ಮಾಡಲಾಯಿತ್ತು. ಪರಿಸರ ಸಂರಕ್ಷಣೆಯಲ್ಲಿ ಯುವ ಜನತೆಯ ಪಾತ್ರ, ಜಾನಪದ ಕಲೆ ಮತ್ತು ನೃತ್ಯ, ಭಾರತೀಯ ಯೋಧರ ಪಾತ್ರ, ದೇಶ ಭಕ್ತಿ ಹೋರಾಟಗಾರರ ಕೊಡುಗೆ, ಕರ್ನಾಟಕ ಪೆÇಲೀಸರ ಪಾತ್ರ, ಯೋಧ ಮತ್ತು ರೈತ, ಏಕತೆ ಮತ್ತು ಪರಂಪರೆ, ಮೊಬೈಲ್ ನಿಂದ ಪುಸ್ತಕದೆಡೆಗೆ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಮಾದಕ ವ್ಯಸನ ಮುಕ್ತ ಸಮಾಜ, ಸೇರಿದಂತೆ ವಿವಿಧ ಥೀಮ್ ಗಳಿಗೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.