ಅ.3ರಿಂದ ನವರಾತ್ರಿ ಜನಪದ ರಂಗ ಉತ್ಸವ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಂಗಾಯಣದ ಅಂಗಳದಲ್ಲಿ ನವರಾತ್ರಿ ಜನಪದ ರಂಗ ಉತ್ಸವವನ್ನು ಅ.3ರಿಂದ 11ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ಅಳಿವಿನಂಚಿನಲ್ಲಿರುವ ಕಲೆಗಳನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಜನಪದ ರಂಗ ಉತ್ಸವ ಆಯೋಜಿಸಲಾಗಿದೆ. 9 ದಿನಗಳ ಕಾಲ ಪ್ರತಿದಿನ ಸಂಜೆ 6.30ಕ್ಕೆ ರಂಗಾಯಣದ ವನರಂಗದಲ್ಲಿ ಪ್ರದರ್ಶನ ನಡೆಯಲಿದೆ. ಪ್ರತಿ ದಿನವೂ ಒಬ್ಬರು ಜನಪದ ಕಲಾವಿದರನ್ನು ಸನ್ಮಾನಿಸಲಾಗುತ್ತದೆ. ಪ್ರದರ್ಶನಕ್ಕೂ ಮುನ್ನ ಪ್ರತಿ ದಿನ ಸಂಜೆ 5.30ಕ್ಕೆ ಅಂತಾರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವೂ ಇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.3ರಂದು ಸಂಜೆ 5.30ಕ್ಕೆ ನವರಾತ್ರಿ ಜನಪದ ರಂಗ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ತೊಗಲು ಗೊಂಬೆಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಧರಣಿದೇವಿ ಮಾಲಗತ್ತಿ, ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್, ಶಾಸಕ ಕೆ.ಹರೀಶ್‍ಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅ.3 ರಂದು ಮೈಸೂರು ಗುರುರಾಜ್ ಮತ್ತು ತಂಡದಿಂದ ಮಂಟೇಸ್ವಾಮಿ ಕಾವ್ಯ, 4ರಂದು ಬಳ್ಳಾರಿಯ ಸಂಗಮೇಶ್ವರ ನಾಟಕ ಮಂಡಳಿ ವತಿಯಿಂದ ರೇಣುಕಾ ಮಹಾತ್ಮೆ, 5ರಂದು ಹಾಸನ ಜಿಲ್ಲೆಯ ಹೂವಿನಹಳ್ಳಿ ಶ್ರೀ ರಾಜಾರಾಮ ತೊಗಲುಗೊಂಬೆ ಮೇಳದಿಂದ ಮಾಯಾವಿ ಇಂದ್ರಜಿತ್, 6ರಂದು ಬೆಳಗಾವಿ ಜಿಲ್ಲೆ ಸವದಿಯ ಶ್ರೀ ವೀರಭದ್ರೇಶ್ವರ ಕಲಾ ಸಂಘ ಹಾಗೂ ಶ್ರೀಕೃಷ್ಣ ಪಾರಿಜಾತ ಕಂಪನಿ ವತಿಯಿಂದ ಶ್ರೀಕೃಷ್ಣ ಪಾರಿಜಾತ, 7 ರಂದು ಕುಂದಾಪುರದ ಅಶ್ವಿನಿ ಕೊಂಡದಕುಳಿ ಮತ್ತು ತಂಡದಿಂದ ನರಕಾಸುರ ವಧೆ(ಯಕ್ಷಗಾನ), 8 ರಂದು ಬೆಳಗಾವಿಯ ಶ್ರೀ ಅಂಬಿಕಾ ದೇವಿ ಸಂಗ್ಯಾಬಾಳ್ಯ ಬಯಲಾಟ ಕಲಾಸಂಘದಿಂದ ಸಂಗ್ಯಾಬಾಳ್ಯ, 9ರಂದು ತುಮಕೂರು ಜಿಲ್ಲೆ ತಿಪಟೂರಿನ ಮೂಡಲಪಾಯ ಯಕ್ಷಗಾನ ಟ್ರಸ್ಟ್ ವತಿಯಿಂದ ಕರಿಭಂಟನ ಕಾಳಗ, 10ರಂದು ತುಮಕೂರಿನ ರಂಗಕೀರ್ತನ ಸಂಪದ ಡಾ.ಲಕ್ಷ್ಮಣದಾಸ್ ಮಿತ್ರ ಮಂಡಳಿ ವತಿಯಿಂದ ಪಾದುಕಾ ಪಟ್ಟಾಭಿಷೇಕ ಹಾಗೂ 11 ರಂದು ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಶ್ರೀರಾಮೇಶ್ವರ ಕೃಪಾಪೆÇೀಷಿತ ಯಕ್ಷಗಾನ ಸೂತ್ರದ ಬೊಂಬೆ ಮೇಳದಿಂದ ಸತ್ಯ ಹರಿಶ್ಚಂದ್ರ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರತಿ ದಿನ ಸಂಜೆ 5.30ಕ್ಕೆ ಅಂತಾರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವೂ ಇರಲಿದೆ. ಉತ್ತರ ಪ್ರದೇಶದ ಹೋಲಿ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ತ್ರಿಪುರದ ಮಮಿತ ನೃತ್ಯ, ಮಧ್ಯಪ್ರದೇಶದ ಬದಾಮಿ ನೃತ್ಯ, ಒಡಿಸ್ಸಾದ ಬದಾನ್ ನೃತ್ಯ, ಕೇರಳದ ಸಿಂಗಾರಿ ಮೇಳಂ, ತಮಿಳು ನಾಡಿನ ಕರಗಂ ನೃತ್ಯ, ರಾಜಸ್ಥಾನದ ಚಕ್ರಿ ನೃತ್ಯ, ಉತ್ತರ ಖಾಂಡದ ಥಡಿಯಾ ಚಾಫ್ಲಾ, ಹರಿಯಾಣದ ಫೆÇೀಮರ್ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಉತ್ಸವದ ಸಂಚಾಲಕಿ ಬಿ.ಎನ್.ಶಶಿಕಲಾ ಇದ್ದರು.