ಸಿದ್ಧರಾಮಯ್ಯ ನನ್ನ ಮನೆ ದೇವರು
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ಸಿದ್ದರಾಮಯ್ಯ ನನ್ನ ಮನೆ ದೇವರು. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿಲ್ಲ ಎಂದು ಮೈಸುರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.
ಮೈಸೂರಿನ ಮುಡಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ನನ್ನನ್ನು ಮುಡಾ ಅಧ್ಯಕ್ಷರನ್ನಾಗಿ ನೇಮಿಸಿದರು. ಅಧಿಕಾರ ವಹಿಸಿಕೊಂಡ ಬಳಿಕ ತುಂಡು ಭೂಮಿ ಉಳಿಸಲು ಪ್ರಯತ್ನ ಮಾಡಿದ್ದೇನೆ. ನಾನು 50:50 ಅನುಪಾತದ ನಿವೇಶನ ಮಂಜೂರು ಮಾಡಬಾರದು ಅಂತ ಸೂಚಿಸಿದ್ದೆ. ಶಾಸಕ ಹರೀಶ್ ಗೌಡ ಕೂಡ ಹೇಳಿದರು. ಆದರೆ ಮಾರಗೌಡನಹಳ್ಳಿ ಸರ್ವೇ ನಂ 77, 57ರ 8 ಎಕರೆ ಜಾಗಕ್ಕೆ ನಿವೇಶನ ಕೊಟ್ಟಿದ್ದಾರೆ.
ಕಸಬಾ ಹೋಬಳಿಯ ಸರ್ವೇ ನಂ. 86ರ ಜಾಗಕ್ಕೂ ನಿವೇಶನ ಮಂಜೂರು ಮಾಡಿದ್ದಾರೆ. ನನ್ನ ತಪ್ಪು ಏನೂ ಇಲ್ಲ. ಸಿದ್ದರಾಮಯ್ಯ ನನ್ನ ಮನೆ ದೇವರು. ಅವರಿಗೆ ದ್ರೋಹ ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ. 2020ರಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಆರ್‍ಟಿಐ ಕಾರ್ಯಕರ್ತರೂ ಯಾಕೆ ಪ್ರಶ್ನೆ ಮಾಡಲಿಲ್ಲ. ಸಿದ್ದರಾಮಯ್ಯ 40 ವರ್ಷದಿಂದಲೂ ಸ್ವಚ್ಛ, ಪ್ರಾಮಾಣಿಕವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹಾಗೆಯೇ ನಾನು ಯಾರಿಗೂ ದ್ರೋಹ ಮಾಡಿಲ್ಲ. ನನ್ನ ಮನೆ ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ನಮ್ಮ ಹೆತ್ತ ತಾಯಿ ಮೇಲಾಣೆ ನಾನು ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿಲ್ಲ. ಆದರೆ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಮೇಲೆ ಆರೋಪ ಮಾಡುತ್ತಾರೆ. ನಾನು ಅಧ್ಯಕ್ಷ ಆದ ಮೇಲೆ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಅಂತಿದ್ದಾರೆ. ದಯಮಾಡಿ ಇಂತಹ ಆರೋಪ ತೆಜೋವಧೆ ಮಾಡಬೇಡಿ. ಹರೀಶ್‍ಗೌಡ, ಬಿಜೆಪಿ ಶಾಸಕ ಶ್ರೀವತ್ಸ ಅವರು ಪತ್ರ ಕೊಟ್ಟಿದ್ದರು. 50:50 ಅನುಪಾತ ಮಾಡದಂತೆ ಶಾಸಕರು ಮನವಿ ಮಾಡಿದರು. ನಾನು ಕೂಡ ಆಯುಕ್ತರಿಗೆ 50ರ ಅನುಪಾತ ಮಾಡದಂತೆ ಸೂಚಿಸಿದ್ದೆ. ಆದರೂ ಕೂಡ ಆಯುಕ್ತರು ಯಾರ ಮಾತು ಕೇಳದೆ 50:50 ಅನುಪಾತ ಮಾಡಿದರು ಎಂದು ಆರೋಪಿಸಿದರು.
ನನ್ನ ಪಕ್ಷದಿಂದಲೇ ನನಗೆ ನಿರಂತರ ತೇಜೋವಧೆ:
ನನಗೆ 73 ವರ್ಷ, ಅನಾರೋಗ್ಯದಿಂದ ಇದ್ದೇನೆ. ನನ್ನ ಪಕ್ಷದಿಂದಲೇ ನನಗೆ ನಿರಂತರ ತೇಜೋವದೆ ಆಗುತ್ತಿದೆ. ಬೇರೆ ಪಕ್ಷದವರು ನನ್ನ ವಿರುದ್ಧ ಮಾತನಾಡುತ್ತಿಲ್ಲ. ನನ್ನ ಪಕ್ಷದವರೇ ನನ್ನ ವಿರುದ್ಧ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇಂತವರ ವಿರುದ್ಧ ಕ್ರಮ ಕೈಗೊಳ್ಳಿ. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದ್ದಿದ್ದೇನೆ. ವೈದ್ಯರು ನನಗೆ ರೆಸ್ಟ್ ಮಾಡಲು ಹೇಳಿದ್ರು ಬಂದಿದ್ದೇನೆ. ಜನರಿಗೆ ಸತ್ಯ ಗೊತ್ತಾಗಲಿ ಎಂದು ಬಂದಿದ್ದೇನೆ ಎಂದು ಮರೀಗೌಡ ತಿಳಿಸಿದರು.
ಕಾರ್ಯಕರ್ತರು ರಾಜೀನಾಮೆ ಕೊಡಿ ಅಂತಾರೆ. ಆದರೆ ನನಗೆ ಹೈಕಮಾಂಡ್ ಸಿದ್ದರಾಮಯ್ಯ ಅವರು. ಅವರು ಹೇಳಿದರೆ ರಾಜೀನಾಮೆ ಕೊಡುತ್ತೇನೆ. ಈ ಎಲ್ಲಾ ಹಗರಣ ಆಗಿದ್ದು ಬಿಜೆಪಿ ಅವಧಿಯಲ್ಲಿ. ಈ ಹಿಂದಿನ ಆಯುಕ್ತರಾದ ನಟೇಶ್, ದಿನೇಶ್ ಅವಧಿಯಲ್ಲಿ ಆಗಿರೋದು. ಯಾಕೆ ಅಂದು ಅವರ ವಿರುದ್ಧ ಬಿಜೆಪಿ ಪಕ್ಷ ಕ್ರಮ ಕೈಗೊಂಡಿಲ್ಲ. ಇದೆಲ್ಲ ಬಿಜೆಪಿ ಅವಧಿಯಲ್ಲೇ ಆಗಿರೋದು ಎಂದು ಮರೀಗೌಡ ಆರೋಪಿಸಿದರು.