ಅ.3ರಿಂದ ದಸರಾ ಸಿಎಂ ಕಪ್ ಕ್ರೀಡಾಕೂಟ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:– ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅ.3ರಿಂದ 6ರವರೆಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ ಆಯೋಜಿಸಲಾಗಿದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ, ದಸರಾ ಕ್ರೀಡಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜಿತೇಂದ್ರ ಶೆಟ್ಟಿ ತಿಳಿಸಿದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.3ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಪ್ಯಾರಿಸ್ ಒಲಂಪಿಕ್ಸ್ ಕಂಚಿನ ಪದಕ ವಿಜೇತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ, ಡಿ.ದೇವರಾಜ ಅರಸು ಕುಸ್ತಿ ಅಖಾಡ, ಮೈಸೂರು ವಿವಿ ವಿವಿಧ ಕ್ರೀಡಾಂಗಣ ಸೇರಿದಂತೆ ನಗರದ ವಿವಿಧೆಡೆ ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್‍ಬಾಲ್, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿವೆ. ಎನ್‍ಐಇ ಕಾಲೇಜು ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಟೆನಿಸ್, ಶೂಟಿಂಗ್, ಯೋಗಾ, ನೆಟ್‍ಬಾಲ್, ಆರ್ಚರಿ, ವುಶು, ಟೇಬಲ್ ಟೆನಿಸ್ ಸೇರಿದಂತೆ ಒಟ್ಟು 26 ಕ್ರೀಡೆಗಳು ನಡೆಯಲಿವೆ ಎಂದರು.
ಈ ಬಾರಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ವಿಭಾಗ ಮಟ್ಟದದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದರು.
ಪ್ರತಿ ವಿಭಾಗಕ್ಕೆ ತಲಾ 7 ಅಥವಾ 8 ಜಿಲ್ಲೆಗಳನ್ನು ಸೇರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಗಳೂರು, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಿವೆ. ಬೆಂಗಳೂರು ನಗರ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯನ್ನು ಮಾತ್ರ ಸೇರಿಸಲಾಗಿದೆ. ಒಟ್ಟು ಎಲ್ಲ ವಿಭಾಗಗಳಿಂದ 3 ಸಾವಿರ ಕ್ರೀಡಾಪಟುಗಳು, 800 ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೂ ವಸತಿ, ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ದಸರಾ ಕ್ರೀಡಾ ಉಪ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ನಾಯಕ್, ಮುಖ್ಯ ತರಬೇತುದಾರ ಡಾ.ವಸಂತ್‍ಕುಮಾರ್, ಸುಂದರೇಶ್ ಇತರರಿದ್ದರು.