ಅ.5ರಿಂದ ದಸರಾ ಪಂಚ ಕಾವ್ಯೋತ್ಸವ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ನಾಡಹಬ್ಬ ದಸರಾ ಅಂಗವಾಗಿ ಈ ಬಾರಿಯ ಕವಿಗೋಷ್ಠಿಯನ್ನು ಪಂಚಕಾವ್ಯೋತ್ಸವ ಎಂಬ ಹೆಸರಿನಲ್ಲಿ ಅ.5ರಿಂದ 9ರವರೆಗೆ ಆಯೋಜನೆ ಮಾಡಲಾಗಿದೆ ಎಂದು ಉಪ ಸಮಿತಿ ಕಾರ್ಯಾಧ್ಯಕ್ಷೆ ಡಾ.ಎನ್.ಕೆ.ಲೋಲಾಕ್ಷಿ ತಿಳಿಸಿದರು.
ಕಲಾಮಂದಿರದ ಸುಚಿತ್ರಾ ಕಲಾಗ್ಯಾಲರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1980ರಿಂದ ದಸರಾ ಕವಿಗೋಷ್ಠಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯದು 44ನೇ ಕವಿಗೋಷ್ಠಿ ಆಗಿದೆ. ಅ.5ರಂದು ಬೆಳಗ್ಗೆ 10.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ನಡೆಯುವ ಪಂಚಕಾವ್ಯೋತ್ಸವವನ್ನು ಕವಿ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಡಾ.ಬಂಜಗೆರೆ ಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿಗುರು ಅತಿಥಿಯಾಗಿ ಕು.ಪ್ರಣತಿ ಆರ್.ಗಡಾದ ಭಾಗವಹಿಸುತ್ತಿದ್ದು, ಶಾಸಕ ಕೆ.ಹರೀಶ್‍ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅದೇ ದಿನ ನಡೆಯುವ ಸಮರಸ (ಪ್ರಾದೇಶಿಕ) ಕವಿಗೋಷ್ಠಿಯನ್ನು ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಉದ್ಘಾಟಿಸಲಿದ್ದು, ಮೈಸೂರು ಹಾಗೂ ನೆರೆಯ ಜಿಲ್ಲೆಗಳ ಸುಮಾರು 33 ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಲಿದ್ದಾರೆ ಎಂದು ತಿಳಿಸಿದರು.
ಅ.6ರಂದು ನಡೆಯಲಿರುವ ಸಮನತಾ ಕವಿಗೋಷ್ಠಿಯನ್ನು ದೇವು ಪತ್ತಾರ ಉದ್ಘಾಟನೆ ಮಾಡಲಿದ್ದು, ಶಂಕರ್ ದೇವನೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಶಾಂತ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ಈ ಗೋಷ್ಠಿಯಲ್ಲಿ ಇಲ್ಲಿಯವರೆಗೆ ಮುಖ್ಯವಾಹಿನಿಯಲ್ಲಿ ಭಾಗವಹಿಸದೆ ಇರುವ ಮತ್ತು ನಾನಾ ವೃತ್ತಿಯಲ್ಲಿರುವ ಪ್ರವೃತ್ತಿಯಲ್ಲಿ ಕವಿಯಾಗಿರುವ ಒಟ್ಟು 30 ಕವಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಅ.7ರಂದು ನಡೆಯಲಿರುವ ಈ ಕವಿಗೋಷ್ಠಿ ಚುಟುಕುಗಳ ಮೂಲಕ ಹಾಸ್ಯರಸವನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡಲಿದ್ದು, ಸಾಹಿತಿ ಡಾ.ಹಂಪನಾ ಅವರು ಉದ್ಘಾಟಿಸಲಿದ್ದರೆ. ಡಾ.ಬಸವರಾಜ ಸಾದರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದುಘಿ, ಡಾ.ಲತಾ ರಾಜಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 11 ಕವಿಗಳ ಜುಗಲ್‍ಬಂದಿ ಇರಲಿದೆ ಎಂದು ತಿಳಿಸಿದರು.
ಅ.9ರಂದು ನಡೆಯಲಿರುವ ಸಮೃದ್ಧ ಕವಿಗೋಷ್ಠಿಯನ್ನು ಡಾ.ಎಚ್.ಎಲ್.ಪುಷ್ಪ ಉದ್ಘಾಟಿಸುತ್ತಿದ್ದು ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಪೆÇ್ರ.ಕವಿತಾ ರೈ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದು, 31 ಜಿಲ್ಲೆಗಳಿಂದ ಕವಿಗಳು ಭಾಗವಹಿಸುತ್ತಿದ್ದಾರೆ. ಈ ಗೋಷ್ಠಿ ಬಹುತ್ವ ಮತ್ತು ಪ್ರಬುದ್ಧತೆಯ ಸಂಕೇತವಾಗಿದೆ ಎಂದು ಹೇಳಿದರು.
ಉಪ ವಿಶೇಷಾಧಿಕಾರಿ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಈ ಬಾರಿಯ ಕವಿಗೋಷ್ಠಿಯನ್ನು ಎಲ್ಲರೂ ನೋಡಲು ಅನುಕೂಲವಾಗುವಂತೆ ಡಿಜಿಟಲ್ ನೇರಪ್ರಸಾರ ಕಲ್ಪಿಸಲಾಗುವುದು. ಪ್ರತಿದಿನ ಬೆಳಗ್ಗೆ 9.30ರಿಂದ 10.30ರವರೆಗೆ ಭಾವಗೀತೆಗಳ ಗಾಯನ ಇರುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ಸಾಹಿತ್ಯಾಸಕ್ತರು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರಚಾರ ಕಾರ್ಯವನ್ನೂ ನಡೆಸಲಾಗುತ್ತಿದೆ ಎಂದರು.
ಮಾವುತನ ಮಗಳಿಂದ ಕಾವ್ಯ ವಾಚನ
ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಕಂಜನ್ ಆನೆಯ ಮಾವುತನ ಮಗಳು ಸಂಗೀತ ಕವನ ವಾಚನ ಮಾಡುತ್ತಿರುವುದು ವಿಶೇಷವಾಗಿದೆ. ಅದೇ ರೀತಿ ಖ್ಯಾತ ಸಾಹಿತಿ ಬೆಂಗಳೂರು ವೃದ್ಧಾಶ್ರಮದಲ್ಲಿರುವ ಪಂಕಜ ನುಗ್ಗೇಹಳ್ಳಿ, ಕುಬ್ಜೆ ಪೂರ್ಣಿಮಾ ಹಾಗೂ ಜೈಲಿನಲ್ಲಿರುವ ಕೈದಿ ಮನು ಸಮಾನತಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲಿದ್ದಾರೆ. ಅ.8ರಂದು ನಡೆಯಲಿರುವ ಸಮಷ್ಟಿ ಕವಿಗೋಷ್ಠಿ ಈ ಬಾರಿಯ ವಿಶೇಷವಾಗಿದ್ದು, ದೇಶ-ವಿದೇಶಗಳಿಂದ ಬಹುಭಾಷಾ ಕವಿಗಳು ಭಾಗವಹಿಸುತ್ತಿದ್ದು, 16ಕ್ಕೂ ಹೆಚ್ಚು ಕವಿಗಳು ವಿವಿಧ ಭಾಷೆಯ ಕಾವ್ಯಾನುಭವ ಕಟ್ಟಿಕೊಡಲಿದ್ದಾರೆ. ಇಂಗ್ಲಿಷ್, ತಮಿಳು, ತೆಲುಗು, ಬ್ಯಾರಿ, ಬಂಜಾರ, ಮರಾಠಿ, ಮಣಿಪುರಿ, ಭೋರಿ, ಒಡಿಯಾ, ಹಿಂದಿ, ಸಂಸ್ಕೃತ, ಮಲಯಾಳಂ, ಬ್ಯಾರಿ, ಅರೆಭಾಷೆ, ಉರ್ದು, ಕೊಂಕಣಿ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.
ಸಮಿತಿ ಕಾರ್ಯದರ್ಶಿ ಕೃಷ್ಣ ಇದ್ದರು.