ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ ಹಳೆಯ ಅರಮನೆ
ಸಂಜೆವಾಣಿ ನ್ಯೂಸ್
ಮೈಸೂರು: ಅ.01:- ಅರಮನೆ ನಗರಿ ಮೈಸೂರಿನಲ್ಲಿ ಬೆಂಕಿಗಾಹುತಿಯಾದ ಹಳೆಯ ಮರದ ಅರಮನೆ ತಲೆ ಎತ್ತುತ್ತಿದ್ದು, ಮೈಸೂರು ಪಾರಂಪರಿಕ ಉತ್ಪನ್ನಗಳನ್ನು ವಿಶ್ವದೆದುರು ತೆರೆದಿಡಲಿದೆ.
ಈ ಬಾರಿಯ ದಸರಾ ವಸ್ತುಪ್ರದರ್ಶನ ಹೆಚ್ಚು ಆಕರ್ಷಕವಾಗಲಿದ್ದು, 1987ರಲ್ಲಿ ಬೆಂಕಿಬಿದ್ದು ಸುಟ್ಟುಹೋದ ಅರಮನೆ ಮಾದರಿ ್ತ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಮೈಸೂರಿನ ಹೆಮ್ಮೆಯ ಉತ್ಪನ್ನಗಳಾದ ಮೈಸೂರು ರೇಷ್ಮೆ, ನಂಜನಗೂಡು ರಸಬಾಳೆ, ಮಲ್ಲಿಗೆ, ವೀಳ್ಯದೆಲೆ, ಮೈಸೂರು ಪಾಕ್, ಗಂಧದ ಸಾಬೂನು ಸೇರಿದಂತೆ ಸಾಂಪ್ರದಾಯಿಕ ವರ್ಣಚಿತ್ರಗಳ ಪ್ರದರ್ಶನ ಒಳಗೊಂಡಂತೆ ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ 20 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಮೈಸೂರಿನ ಹೆಮ್ಮೆಯ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡುವ ಕೆಲಸ ಮಾಡಲಾಗುತ್ತದೆ. ಉತ್ಪನ್ನಗಳ ವೀಕ್ಷಣೆ, ಮಾರಾಟದ ಜತೆಗೆ ಅವುಗಳ ತಯಾರಿಕೆಯ ಪ್ರಕ್ರಿಯೆಯನ್ನೂ ತಿಳಿಸಲಾಗುತ್ತದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.3 ರಂದು ಸಂಜೆ 8 ಗಂಟೆಗೆ ದಸರಾ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾನೆಗೊಳ್ಳಲಿದ್ದು, ಅಂದೇ ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್ ಹಾಗೂ 153 ಖಾಸಗಿ ಸ್ಟಾಲ್‍ಗಳು ಉದ್ಘಾಟನೆಯಾಗಲಿವೆ. ಈಗಾಗಲೇ ಮಳಿಗೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರತಿಬಾರಿಯಂತೆ ಈ ಬಾರಿಯೂ ಮಕ್ಕಳಿಗೆ ಪ್ರವೇಶ ದರ 20 ರೂ. ಗಳಿದ್ದು, ವಯಸ್ಕರು ಹಾಗೂ ಇನ್ನಿತರರಿಗೆ 5 ರೂ. ಹೆಚ್ಚಿಸಿ 35 ರೂ. ಟಿಕೆಟ್ ದರ ನಿಗಧಿ ಮಾಡಲಾಗಿದೆ ಎಂದರು.
ಮಕ್ಕಳಿಗೆ ವರ್ಚುವಲ್ ಪಾರ್ಕ್:
90 ದಿನ ನಡೆಯುವ ಈ ಬಾರಿಯ ದಸರಾ ವಸ್ತು ಪ್ರದರ್ಶನ ವಿಶೇಷವಾಗಿರಲಿದೆ. ದೇಶದಲ್ಲೇ ಮೊದಲ ಬಾರಿಗೆ ಮಕ್ಕಳಿಗೆ ಮನರಂಜನೆ ನೀಡಲು ಇಂಟರ್ಯಾಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನ ಒಳಗೊಂಡಿರುವ ವರ್ಚುವಲ್ ಪಾರ್ಕ್ ನಿರ್ಮಿಸಲಾಗಿದೆ.
ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮಗಳು ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10 ರಿಂದ 15 ಸ್ಥಳಗಳಲ್ಲಿ ಏಪೆರ್Çೀರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಅತಿ ಹೆಚ್ಚು ಸ್ಥಳೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಈ ಬಾರಿ ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರ ಹೆಚ್ಚಿಸಲಾಗಿದ್ದು, ಮುಖ್ಯದ್ವಾರ ಮುಂಭಾಗ ಹಾಗೂ ಪ್ರಾಧಿಕಾರದ ಪ್ರಮುಖ ರಸ್ತೆಗಳಲ್ಲಿ ಮತ್ತು ಪ್ರಾಧಿಕಾರದ ವೃತ್ತಗಳಿಗೆ ವಿಶೇಷ ಮಾದರಿಯ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
80 ಎಕ್ಕರೆ ವಿಸ್ತೀರ್ಣದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 3 ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸೆಲ್ಫಿ ಪಾಯಿಂಟ್:
ದಸರಾ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟನ್ನು ನಿರ್ಮಿಸಲಾಗಿದೆ. ಅಲ್ಲದೆ ವಸ್ತು ಪ್ರದರ್ಶನದ ಪಾರ್ಕ್‍ಗಳಲ್ಲಿ ಹೂಗಳಿಂದ ವಿವಿಧ ಆಕಾರದ ಹೂಗುಚ್ಛಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದು ಪ್ರವಾಸಿಗರು ಮತ್ತು ಮಕ್ಕಳಿಗೆ ವಿಶೇಷ ಅನುಭವ ನೀಡುತ್ತದೆ ಎಂದರು.
ಪ್ಲಾಸ್ಟಿಕ್ ಮುಕ್ತ ವಸ್ತುಪ್ರದರ್ಶನ
ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಸ್ತು ಪ್ರದರ್ಶನ ವೀಕ್ಷಿಸಲು ಹಾಗೂ ಉತ್ಪನ್ನಗಳನ್ನು ಕೊಂಡುಕೊಳ್ಳಲು ಬರುವ ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್‍ಗಳ ಬದಲಿಗೆ ಬಟ್ಟೆ ಚೀಲಗಳನ್ನು ತಂದು ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಸಹಕಾರ ನೀಡಬೇಕು.
ಈ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಮುಂಭಾಗದಲ್ಲಿಯೇ ಸಾರ್ವಜನಿಕರಿಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಲ್ಲದೆ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗುವ ಸ್ಟಾಲ್‍ಗಳು ಮತ್ತು ಹೋಟೆಲ್‍ಗಳ ಮಾಲೀಕರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಅಯೂಬ್ ಖಾನ್ ಮಾಹಿತಿ ನೀಡಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್, ಲಯನ್ಸ್ ಕ್ಲಬ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.