ಆ. ೧೭ ರಂದು ರಾಮಾಯಣ ಮಾಸಾಚರಣೆ ಗಮಕದ ವಾರ್ಷಿಕೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೪; ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳ ಗಡಿನಾಡ ಘಟಕ ಮತ್ತು ಏಕಾಹ ಭಜನಾ ಮಂದಿರ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆ. ೧೭ ರಂದು  ಸಂಜೆ ೫ ರಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ರಾಮಾಯಣ ಮಾಸಾಚರಣೆ ಹಾಗೂ ಗಮಕ ಕಾರ್ಯಕ್ರಮದ ವಾರ್ಷಿಕೋತ್ಸವ ಆಧ್ಯಾತ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಅಂದು ಸಂಜೆ ೫ ಗಂಟೆಯಿಂದ ೬ ರಿಂದ ೧೦ನೇ ತರಗತಿ ಮಕ್ಕಳಿಗೆ ರಾಮಾಯಣ ರಸಪ್ರಶ್ನೆ ಸ್ಪರ್ಧೆ, ೬ ಗಂಟೆಗೆ ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ. ಶ್ರೀಧರ್ ಭಟ್ ಸಮಾರಂಭ ಉದ್ಘಾಟಿಸಲಿದ್ದಾರೆ.  ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್  ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಣ್ಣೂರು ವಿಭಾಗದ ಮಾತೃಶಕ್ತಿ ಸಮಿತಿಯ ಮುಖ್ಯಸ್ಥರಾದ ಶ್ರೀಮತಿ ವೀರಾ ಆಳ್ವ ಆಗಮಿಸಲಿದ್ದಾರೆ.  ೬-೩೦ ರಿಂದ ರಾಮಾಯಣ ಸುಂದರ ಕಾಂಡದ ವಾಚನ, ವ್ಯಾಖ್ಯಾನ, ಗಮಕ ನಡೆಯಲಿದ್ದು, ಇಂತಹ ಅಪರೂಪದ ಹೊಸ ಪರಿಕಲ್ಪನೆಯ ಆಧ್ಯಾತ್ಮ, ಸಾಹಿತ್ಯಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಸದ್ಭಕ್ತರು, ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.