ಕನ್ನಡಗಿ ಮಲ್ಲಿಕಾರ್ಜುನನ ಸಂಭ್ರಮದ ಜಾತ್ರೆ, ಪಲ್ಲಕ್ಕಿ ಉತ್ಸವ
ಕಲಬುರಗಿ:ಆ.13:ಕಾಳಗಿ ತಾಲೂಕಿನ ಬೆಣ್ಣೆತೋರಾ ಜಲಾಶಯದ ದಂಡೆಯಲ್ಲಿರುವ ಕನ್ನಡಗಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಎರಡನೇ ಸೋಮವಾರ ಸಡಗರ, ಸಂಭ್ರಮದಿಂದ ಜರುಗಿತು.
ಬೆಳೆಗ್ಗೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಜರುಗಿತು. ಮಧ್ಯಾಹ್ನ ನಂದಿಕೋಲು ಉತ್ಸವ, ಸಾಯಂಕಾಲ ಪಲ್ಲಕ್ಕಿ ಉತ್ಸವ ಡೋಲು,ಹಲಗೆ, ಪುರವಂತರ ಮೆರವಣಿಗೆ ಹಾಗೂ ಅಪಾರ ಭಕ್ತರ ಜೈಘೋಸದ ಮಧ್ಯೆ ಸಡಗರದಿಂದ ಜರುಗಿತು. ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಅರ್ಚಕರಾದ ನಾಗಯ್ಯ ಮಠಪತಿ ಮತ್ತು ಸಿದ್ದಲಿಂಗಪ್ಪ ಹೂಗಾರ ಅವರು ವಿಶೇಷ ಪೂಜೆ ನೆರವೇರಿಸಿದರು. ಹೇರೂರ, ಶೆಳ್ಳಗಿ, ಸಾತಖೇಡ, ಹರಸೂರ ಗ್ರಾಮಗಳ ಜಾನಪದ ಕಲಾತಂಡಗಳಿಂದ ಭಜನೆ, ಹಲಗೆ, ಪುರವಂತರ ಕುಣಿತ, ಡೊಳ್ಳು ವಾದ್ಯಗಳು ಉತ್ಸವಕ್ಕೆ ಮೆರಗು ತಂದವು. ದೇವಸ್ಥಾನ ಸಮಿತಿಯ ಅಧ್ಯಕ್ಷ ಸುಭಾಷ್ ಮಾಲಿಪಾಟೀಲ, ಉಪಾಧ್ಯಕ್ಷ ಶಿವಕುಮಾರ ಪಾಟೀಲ, ಕಾರ್ಯದರ್ಶಿ ಸಿದ್ದು ಕಂಠಿಕಾರ, ಉಪನ್ಯಾಸಕ ಎಚ್. ಬಿ.ಪಾಟೀಲ, ಸಮಾಜ ಸೇವಕ ರಾಜಶೇಖರ ಬಿ.ಮರಡಿ ಹಾಗೂ ಜಿಲ್ಲೆಯ ವಿವಿಧ ಕಡೆಯಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಮಹಿಳೆಯರು ವಿವಿಧ ಸಾಮಾನುಗಳು, ಮಕ್ಕಳು ಆಟಿಕೆಯ ಸಾಮಾಗ್ರಿಗಳು ಖರೀದಿಸಿ, ಸಂಭ್ರಮಿಸಿದರು. ಕಾಳಗಿ ಪೊಲೀಸ್ ಠಾಣೆಯ ಪಿಎಸ್ ಐ ತಿಮ್ಮಯ್ಯ ಬಿ.ಕೆ ಅವರ ನೇತೃತ್ವದಲ್ಲಿ ಜಗನಾಥ ಮುಲಗೆ ಹಾಗೂ ಇನ್ನಿತರ ಪೋಲಿಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಮಾಡಿದ್ದರು.