ಆ. 17, 18ರಂದು ಜಿಲ್ಲಾ ಪ್ರಥಮ ದಲಿತ ಚಳುವಳಿ ಸಾಹಿತ್ಯ ಸಮ್ಮೇಳನ
ಕಲಬುರಗಿ:ಆ.13:ಸಾಂಸ್ಕøತಿಕ ಪರಂಪರೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್ 17 ಮತ್ತು 18ರಂದು ನಗರದ ವಿಶ್ವೇಶ್ವರಯ್ಯಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನಲ್ಲಿ ಸಮಾಜದ ಪರಿವರ್ತನೆಗೆ ಅನೇಕ ರೀತಿಯ ಚಳವಳಿಗಳು ನಡೆದಿವೆ. ಅವು ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಾಹಿತ್ಯವು ನೊಂದು ಬೆಂದವರ ಬಾಳಿಗೆ ಗಟ್ಟಿ ಉಸಿರಾಗಿದೆ ಹಾಗೂ ಜಡ್ಡು ಗಟ್ಟಿದ ಸಮಾಜಕ್ಕೆ ಪರಿವರ್ತನೆಯ ಗಾಳಿ ಸೂಸಿದೆ ಮತ್ತು ಮೌನದ ಮಾತುಗಳಿಗೆ ಧ್ವನಿಯಾಗಿ ನಿಂತಿದೆ. ಈ ನಿಟ್ಟಿನಲ್ಲಿ ಪರಿಷತ್ತು ಹಮ್ಮಿಕೊಂಡಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಹೋರಾಟದ ನೆಲದಲ್ಲಿ ಗುಡುಗು, ಮಿಂಚು, ಸಿಡಿಲಾಗಿ ಮಾರ್ಧನಿಸುತ್ತಿದೆ ಎಂದರು.
ಆಗಸ್ಟ್ 17ರಂದು ಬೆಳಿಗ್ಗೆ 9.45ಕ್ಕೆ ಜಗತ್ ವೃತ್ತದಿಂದ ವಿಶ್ವೇಶ್ವರಯ್ಯಾ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ವಿವಿಧ ಕಲಾ ಮೇಳಗಳೊಂದಿಗೆ ವರ್ಣರಂಜಿತವಾಗಿ ಜರುಗಲಿದೆ. ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಲ್ಯಾಣಕುಮಾರ್ ಶೀಲವಂತ್ ಅವರು ನೇತೃತ್ವ ವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಯಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅದ್ಧೂರಿ ಹಾಗೂ ಅರ್ಥಪೂರ್ಣ ಸಮ್ಮೇಳನ ಜರುಗಲಿದೆ ಎಂದು ಅವರು ಹೇಳಿದರು.
ಮಧ್ಯಾಹ್ನ 1.15ಕ್ಕೆ ಪರೋಪಕಾರಿ ಡಾ. ಶಿವರಾಮ್ ಮೋಘಾ ವೇದಿಕೆಯಡಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಉದ್ಘಾಟಿಸುವರು. ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಪ್ರಶಸ್ತಿ ಪುರಸ್ಕøತ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಡಾ. ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ್, ಎಂ.ವೈ. ಪಾಟೀಲ್, ಡಾ. ಅವಿನಾಶ್ ಜಾಧವ್, ಜಗದೇವ್ ಗುತ್ತೇದಾರ್, ಮಾಣಿಕ್ ಎಸ್. ಕನಕಟ್ಟಿ, ದೇವೀಂದ್ರಪ್ಪ ಮರತೂರ್, ಡಾ. ಕೆ. ಗುರುಲಿಂಗಪ್ಪ, ಚಂದ್ರಕಾಂತ್ ಗದ್ದಗಿ, ಡಾ. ಚಂದ್ರಶೇಖರ್ ಪಾಟೀಲ್, ಸುನೀಲ್ ವಲ್ಲ್ಯಾಪೂರೆ, ನಿತಿನ್ ವಿ. ಗುತ್ತೇದಾರ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಧ್ಯಾಹ್ನ 3.30 ಕ್ಕೆ ಮೊದಲ ಗೋಷ್ಠಿಯಲ್ಲಿ ವರ್ತಮಾನದೊಂದಿಗೆ ಮುಖಾಮುಖಿ ಶೀರ್ಷಿಕೆಯಡಿಯಲ್ಲಿ ದಲಿತ ಸಾಹಿತ್ಯ ಮತ್ತು ಮಹಿಳಾ ಸಂವೇದನೆ ಕುರಿತು ಡಾ. ಅಮೃತಾ ಕಟಕೆ, ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ ಕುರಿತು ಪ್ರೊ. ಸಂಜಯ್ ಮಾಕಲ್ ಅವರು ಮಾತನಾಡಲಿದ್ದು, ಡಾ. ಶ್ರೀಶೈಲ್ ನಾಗರಾಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಶಿವರಂಜನ್ ಸತ್ಯಂಪೇಟೆ ಅವರು ಆಶಯ ನುಡಿಗಳನ್ನಾಡುವರು. 18ರಂದು ಬೆಳಿಗ್ಗೆ 11.15 ಕ್ಕೆ ನಡೆಯುವ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಡಿ.ಜಿ. ಸಾಗರ್ ಅವರ ಬದುಕು ಮತ್ತು ಚಳವಳಿ ಕುರಿತು ಡಾ. ಎಚ್.ಟಿ. ಪೋತೆ ಅವರು ಉಪನ್ಯಾಸ ನೀಡಲಿದ್ದು, ಕರ್ನಾಟಕ ಜಾನಪದ ಅಕ್ಯಾಡೆಮಿ ಅಧ್ಯಕ್ಷ ಶಿವಪ್ರಸಾದ್ ಗೊಲ್ಲಹಳ್ಳಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಮಧ್ಯಾಹ್ನ 12.30ಕ್ಕೆ ಚಿಂತನ-ಮಂಥನ ಗೋಷ್ಠಿಯಲ್ಲಿ ಸಂವಿಧಾನ ಮತ್ತು ಸಮಕಾಲೀನ ತಲ್ಲಣಗಳು ಕುರಿತು ಡಾ. ಐ.ಎಸ್. ವಿದ್ಯಾಸಾಗರ್, ಕನ್ನಡ ಸಾಹಿತ್ಯ ಮತ್ತು ಜನಪರ ಚಳವಳಿ ಕುರಿತು ಪ್ರೊ. ಸುಭಾಷ್ ಶೀಲವಂತ್ ಅವರು ಮಾತನಾಡಲಿದ್ದಾರೆ. ಡಾ. ಚಂದ್ರಕಲಾ ಬಿದರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಶರಣಪ್ಪ ಸೈದಾಪೂರ್ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಡಾ. ಜಗನ್ನಾಥ್ ಎಲ್. ತರನಳ್ಳಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲೆಯ ಅನೇಕ ಹಿರಿಯ ಮತ್ತು ಯುವ ಕವಿಗಳು ಪ್ರಚಲಿತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸಾಯಂಕಾಲ 5.30ಕ್ಕೆ ನಡೆಯುವ ಸಮಾರೋಪ ಹಾಗೂ ಸತ್ಕಾರ ಸಂಭ್ರಮದಲ್ಲಿ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು, ಬಂತೆಜೀ ವರಜ್ಯೋತಿ ಧೇರೋ, ಸಂಗಾನಂದ್ ಬಂತೆಜೀ ಸಾನಿಧ್ಯ ವಹಿಸಲಿದ್ದಾರೆ. ಗಾಯಕರಾದ ಪ್ರೊ. ಅಂಬಣ್ಣ ಜೀವಣಗಿ, ಸಿದ್ದಾರ್ಥ ಚಿಮ್ಮಾಇದಲಾಯಿ, ಶ್ರೀಧರ್ ಹೊಸಮನಿ, ಜೈಭೀಮ್ ಸಾವಳಗಿ, ಬಸವರಾಜ್ ಆಲಗೂಡ್, ವಾಡಿಯ ಜನಕಲಾ ಸಮಿತಿ ತಂಡದವರಿಂದ ಜಾಗೃತಿಯ ಗೀತೆಗಳು ಹಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ಡಾ. ಡಿ.ಜಿ. ಸಾಗರ್ ಅವರ ಬದುಕು ಮತ್ತು ಚಳವಳಿಗೆ ಸಂಬಂಧಿಸಿದ ಭಾವಚಿತ್ರಗಳ ಪ್ರದರ್ಶನವೂ ಸಹ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ್ ಛಪ್ಪರಬಂದಿ, ರಾಜೇಂದ್ರ ಮಾಡಬೂಳ್, ಡಾ. ರೆಹಮಾನ್ ಪಟೇಲ್, ಎಂ.ಎನ್. ಸುಗಂಧಿ, ಎಸ್.ಪಿ. ಸುಳ್ಳದ್, ಎಚ್. ಶಂಕರ್, ಬಿ.ಸಿ. ವಾಲಿ, ಸುರೇಶ್ ಹಾದಿಮನಿ, ಲಚ್ಚಪ್ಪ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.