ತೀರ್ಥ ಸ್ನಾನಕ್ಕೆಂದು ಹೋದ ಇಬ್ಬರು ಬಾಲಕರು ನದಿಪಾಲು
ಕಲಬುರಗಿ:ಆ.13: ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋದ ನಾಲ್ವರು ಬಾಲಕರ ಪೈಕಿ ಇಬ್ಬರು ನದಿ ಪಾಲಾದ ಘಟನೆ ಅಫಜಲಪುರ ತಾಲ್ಲೂಕಿನ ದೇವಲ್ ಗಾಣಗಾಪುರದಲ್ಲಿ ಮಂಗಳವಾರ ಸಂಭವಿಸಿದೆ.
ಮೃತರನ್ನು ಗಾಣಗಾಪುರದ ನಿವಾಸಿ ಪ್ರಕಾಶ್ ಸುಭಾಷ್ ವಾಗಮೊರೆ (18) ಮತ್ತು ಗುಜರಾತ್ ಮೂಲದ ಸಕ್ಷಮ್ ವಿನೋದ್ ಕೊಳಿ (15) ಎಂದು ಗುರುತಿಸಲಾಗಿದೆ.
ಮೃತ ಇಬ್ಬರು ಬಾಲಕರು ಸೇರಿ ನಾಲ್ವರು ಪಾಪನಾಶಿ ಅಷ್ಟ ತೀರ್ಥ ಸ್ನಾನ ಕೈಗೊಂಡಿದ್ದರು ಎನ್ನಲಾಗಿದೆ. ಮಂಗಳವಾರ ಪಾಪನಾಶಿ ಅಷ್ಟ ತೀರ್ಥ ಸ್ನಾನ ಮಾಡುವಾಗ ಸಕ್ಷಮ್ ಎನ್ನುವ ಬಾಲಕನು ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದ. ಆತನಿಗೆ ರಕ್ಷಿಸಲು ಪ್ರಕಾಶ್ ಮುಂದಾಗಿದ್ದು, ಆ ವೇಳೆಯಲ್ಲಿ ಇಬ್ಬರೂ ಮೃತಪಟ್ಟರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ದೇವಲ್ ಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.