ಪಿಎಸ್‍ಐ ಪರಶುರಾಮ್ ಸಾವು ಪ್ರಕರಣ: ಶಾಸಕ ಚೆನ್ನಾರೆಡ್ಡಿ ತುನ್ನೂರ್, ಪಂಪನಗೌಡ ಬಂಧನಕ್ಕೆ ಆಗ್ರಹಿಸಿ ಆ. 19ರಂದು ಬೃಹತ್ ಪ್ರತಿಭಟನೆ
ಕಲಬುರಗಿ:ಆ.13: ಯಾದಗಿರಿ ಪಿಎಸ್‍ಐ ಪರಶುರಾಮ್ ಚಲವಾದಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಶ್ರೀಮತಿ ಶ್ವೇತಾ ಅವರು ಕೊಟ್ಟ ದೂರಿನ ಅಡಿ ಪ್ರಕರಣ ದಾಖಲಾಗಿದ್ದು, ಕೂಡಲೇ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಹಾಗೂ ಶಾಸಕರ ಪುತ್ರ ಪಂಪನಗೌಡ ತುನ್ನೂರ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 19ರಂದು ಬೆಳಿಗ್ಗೆ 11-30ಕ್ಕೆ ನಗರದ ಜಗತ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ತನ್ನನ್ನು ಮಾರಾಟಕ್ಕಿಟ್ಟಾಗ ತನಗೆ ಆಯ್ಕೆ ಮಾಡಿದ ಜನರಿಗೆ ಹರಾಜಿಗೆ ಹಾಕುವಂತಹ ಕೆಲಸವನ್ನು ಶಾಸಕ ಚೆನ್ನಾರೆಡ್ಡಿ ತುನ್ನೂರ್ ಹಾಗೂ ಅವರ ಪುತ್ರ ಪಂಪನಗೌಡ ಮಾಡಿದ್ದಾರೆ ಎಂದು ದೂರಿದರು.
ಪಿಎಸ್‍ಐ ಪರಶುರಾಮ್ ಅವರನ್ನು ಅವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಿಎಸ್‍ಐ ಶಾಸಕರಿಗೆ ಭೇಟಿ ಮಾಡಿ ಅವಧಿ ಮುಗಿಯುವವರೆಗೆ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಶಾಸಕರು ಮತ್ತು ಅವರ ಪುತ್ರ ಇಬ್ಬರೂ 30 ಲಕ್ಷ ರೂ.ಗಳ ಬೇಡಿಕೆ ಇಡುತ್ತಾರೆ. ಇದರಿಂದ ಪಿಎಸ್‍ಐ ಅಸಹಾಯಕರಾಗುತ್ತಾರೆ. ಏಳು ತಿಂಗಳು ಅಂದರೆ ಅವಧಿ ಮುಗಿಯುವುದರೊಳಗಾಗಿ ಯಾದಗಿರಿ ನಗರದ ಸೇನ ಠಾಣೆಗೆ ವರ್ಗಾವಣೆಯಾಗುತ್ತಾರೆ. ಇದರಿಂದ ಪರಶುರಾಮ್ ಅವರು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ. ಪರಶುರಾಮ್ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಾರೆ. ಹೀಗಾಗಿ ಹಣದ ಬೇಡಿಕೆ ಇಟ್ಟಿದ್ದರಿಂದಲೇ ತನ್ನ ಪತಿ ಸಾವಿಗೀಡಾಗಿರುವ ಕುರಿತು ಪತ್ನಿ ಶ್ರೀಮತಿ ಶ್ವೇತಾ ಅವರು ದೂರು ಸಲ್ಲಿಸಿದ್ದು, ಅವರ ವಿರುದ್ಧ ಕಳೆದ 3ರಂದು ಪ್ರಕರಣ ದಾಖಲಾಗುತ್ತದೆ ಎಂದು ಅವರು ಹೇಳಿದರು.
ಪರಶುರಾಮ್ ಚಲವಾದಿ ಅವರು ಬಡತನದಲ್ಲಿ ಅರಳಿದ ಪ್ರತಿಭಾವಂತ ಯುವಕ. ಕಠಿಣ ಪರಿಶ್ರಮದ ಮೇಲೆ ಸುಮಾರು ಎಂಟು ಹುದ್ದೆಗಳನ್ನು ಪಡೆದುಕೊಂಡಿದ್ದರೂ ಇಲ್ಲಿ ಬಲಿಷ್ಠರ ಕುತಂತ್ರಕ್ಕೆ, ದ್ವೇಷಕ್ಕೆ, ಹಣದಾಸೆಗೆ ಒಬ್ಬ ದಕ್ಷ ದಲಿತ ಪೋಲಿಸ್ ಅಧಿಕಾರಿ ಬಲಿಯಾಗಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪುತ್ರನನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ. ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡ ಪರಶುರಾಮ್‍ನ ಪತ್ನಿ ಶ್ರೀಮತಿ ಶ್ವೇತಾ ತನ್ನ ಮಗ ಅಪ್ಪ ಎಲ್ಲಿ ಎಂದು ಕೇಳಿದಾಗ ತನ್ನ ಪುತ್ರನಿಗೆ ತಾನು ಏನು ಹೇಳಲಿ ಎಂದು ಹೇಳುವಾಗ ಉತ್ತರವೇನು? ಎಂದು ಖಿನ್ನವಾಗಿ ಪ್ರಶ್ನಿಸಿದರು.
2019-2023ರ ತನಕ ದುರಾಡಳಿತವನ್ನು ಕೊನೆಗಾಣಿಸಲು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲಾಯಿತು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪ್ರಗತಿಪರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರಿಂದ ಸರ್ಕಾರ ಬರಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷವು ಜನಾದೇಶವನ್ನು ಮರೆತಿದೆ. ಕಾಂಗ್ರೆಸ್ ಪಕ್ಷವು ಜನ ಕೊಟ್ಟ ಬೆಂಬಲದ ಸಂದೇಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಬಿಜೆಪಿ 40ರಷ್ಟು ಭ್ರಷ್ಟಾಚಾರ ಕುರಿತು ಪ್ರಚಾರ ಮಾಡಿ ಗೆದ್ದ ಕಾಂಗ್ರೆಸ್ ಭ್ರಷ್ಟಾಚಾರ ಕುರಿತಂತೆ ತಾನು ಭಿನ್ನವಾಗಿರುವ ಕುರಿತು ತೋರಿಸಿಕೊಳ್ಳುತ್ತಿಲ್ಲ. ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳು, ಆಯಕಟ್ಟಿನ ಜಾಗಕ್ಕೆ ಬರಲು ಒಂದು ವರ್ಷಕ್ಕೆ ಲಕ್ಷ, ಲಕ್ಷ ರೂ.ಗಳನ್ನು ಕೊಡಬೇಕಾಗುತ್ತದೆ. ಅದನ್ನು ಶಾಸಕರ ಮಕ್ಕಳೇ ಡೀಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಡೀಲ್‍ನಲ್ಲಿಯೇ ಪರಶುರಾಮ್ ಅವರು ಬಲಿಯಾಗಿದ್ದಾರೆ. ಹಾಗಾಗಿ ಕೂಡಲೇ ಶಾಸಕ ಹಾಗೂ ಅವರ ಪುತ್ರನಿಗೆ ಬಂಧಿಸಲು ಒತ್ತಾಯಿಸಿ ಹೋರಾಟ ರೂಪಿಸಲಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಲ್ಲಾ ಸಂಚಾಲಕ ಎಂ.ಎಂ. ಮೇತ್ರೆ, ಮಹಾಂತೇಶ್ ಬಡದಾಳ್, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್, ಸಂತೋಷ್ ತೆಗನೂರ್, ಶಿವಶರಣಪ್ಪ ಕುರನಳ್ಳಿ ಮುಂತಾದವರು ಉಪಸ್ಥಿತರಿದ್ದರು.