ಪುಸ್ತಕಗಳು ವಿದ್ಯಾರ್ಥಿಗಳ ಅವಿಭಾಜ್ಯ ಅಂಗ
ಕಲಬುರಗಿ:ಆ.13: ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗಳ ಪಾಲಿಗೆ ಅವಿಭಾಜ್ಯ ಅಂಗಗಳಾಗಿವೆ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿಪೂರ್ವ ಮಹಾವಿದ್ಯಾಲಯದ ಗ್ರಂಥಪಾಲರಾದ ಶ್ರೀಮತಿ ಶಶೀಕಲಾ ಮರಮಕಲ್ ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಗ್ರಂಥಾಲಯ ಯಾವುದೇ ಶಾಲಾ ಕಾಲೇಜುಗಳ ಹೃದಯ ಸ್ಥಾನವಾಗಿರುತ್ತದೆ. ಜ್ಞಾನದ ಭಂಡಾರವಾಗಿರುತ್ತದೆ. ಗ್ರಂಥಾಲಯದ ಪೀತಾಮಹ ಡಾ.ಎಸ್.ಆರ್.ರಂಗನಾಥ ಅವರ ಜನ್ಮ ದಿನದ ಪ್ರಯುಕ್ತ ಗ್ರಂಥಾಲಯ ದಿನಾಚರಣೆ ಆಚರಿಸಲಾಗುತ್ತದೆ. ಅವರು ಮೊದಲಿಗೆ ಗ್ರಂಥಾಲಯಗಳನ್ನು ಆರಂಭ ಮಾಡಿದರು. ಪದ್ಮಶ್ರೀ ಡಾ.ಎಸ್.ಆರ್.ರಂಗನಾಥ್ ಅವರು ಗ್ರಂಥಾಲಯ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಗ್ರಂಥಾಲಯಗಳು ವಿದ್ಯಾರ್ಥಿಗಳ ಜೀವನ ರೂಪಿಸುವುದಕ್ಕೆ ಮಹತ್ವ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಹ ಪಾಠದ ನಂತರ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲಿ ಓದುವುದರಲ್ಲಿಯೇ ಕಳೆಯಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಜ್ಞಾನಾಭಿವೃದ್ದಿಗೆ ಮತ್ತು ಅಮೂಲ್ಯವಾದ ಸಮಯ ಸದುಪಯೋಗಕ್ಕೆ ಗ್ರಂಥಾಲಯಗಳು ಬಹಳ ಮುಖ್ಯ ಎನಿಸುತ್ತದೆ. ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾರ್ಯವನ್ನು ಮಾಡುತ್ತಿದೆ. ಪುಸ್ತಕ ಮನುಷ್ಯನ ಮಿತ್ರ, ಜ್ಞಾನವನ್ನು ನೀಡುವ ಕಾಮಧೇನು,ಮಾರ್ಗದರ್ಶಕ ಮಾಹಿತಿ ಪಡೆಯಲು ಪುಸ್ತಕ ಭಂಡಾರಗಳು ಬಹಳ ಮುಖ್ಯವಾಗಿದೆ. ನಾವು ಹೆಚ್ಚು ಓದಿದಾಗ, ನಮ್ಮ ಸಾಮಾಜಿಕ ಕೌಶಲ್ಯಗಳು ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಂಥಾಲಯಗಳು ಪ್ರಗತಿ ಸಾಧಿಸಲು ಉತ್ತಮ ವೇದಿಕೆಯಾಗಿದೆ. ನಮ್ಮ ಕಲಿಕೆಯ ಸಾಮಥ್ರ್ಯಗಳು ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಇದು ನಮ್ಮ ಸವಾರ್ಂಗೀಣ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದು ಹೇಳಿದರು.
ವೇದಿಕೆ ಮೇಲೆ ಮಹಾವಿದ್ಯಾಲಯದ ಗ್ರಂಥಪಾಲರಾದ ಶಶಿಕಲಾ ಪಾರಾ ಇದ್ದರು. ಕೃಪಾಸಾಗರ ಗೊಬ್ಬುರ ಸ್ವಾಗತಿಸಿ, ನಿರೂಪಿಸಿ ಮತ್ತು ವಂದಿಸಿದರು. ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.