ಸೆಪ್ಟೆಂಬರ್ ನಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆ:ಡಾ.ಶರಣಪ್ರಕಾಶ ಪಾಟೀಲ
ಕಲಬುರಗಿ,ಆ.13:ಕಲಬುರಗಿಯಲ್ಲಿ ಸುಮಾರು 192 ಕೋಟಿ ರೂ. ಕೆ.ಕೆ.ಆರ್.ಡಿ.ಬಿ. ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, ಬಾಕಿ ಇರುವ ವಿದ್ಯುತ್ ಪೂರೈಕೆ ಕಾರ್ಯ ಈ ಮಾಸಾಂತ್ಯಕ್ಕೆ ಮುಗಿಯಲಿರುವ ಕಾರಣ ಸೆಪ್ಟೆಂಬರ್ ಮಾಹೆಯಲ್ಲಿ ಇದರ ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಮಂಗಳವಾರ ಇಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, 371 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಜಿಮ್ಸ್ ನಲ್ಲಿನ ಆಸ್ಪತ್ರೆಯನ್ನು ಒಂದು ವಾರದೊಳಗೆ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಕಟ್ಟಡದಲ್ಲಿ ಕಿಚನ್ ಸೇರಿದಂತೆ ಹೆಚ್ಚುವರಿ ಕಾಮಗಾರಿಗಳು ಸೇರ್ಪಡೆಯಾಗಿರುವುದರಿಂದ 72 ಕೋಟಿ ರೂ. ಹೆಚ್ಚುವರಿ ಅನುದಾನ ಕೋರಿದ್ದು, ಇದನ್ನು ಸಚಿವ ಸಂಪುಟ ಸಭೆ ಮುಂದಿಟ್ಟು ಮಂಜೂರಾತಿ ಪಡೆಯಲಾಗುವುದು. ಈಗಾಗಲೆ ವೈದ್ಯಕೀಯ ಸಲಕರಣೆಗೂ ಟೆಂಡರ್ ಕರೆಯಲಾಗಿದೆ ಎಂದರು.
ಇದಲ್ಲದೆ ನೂತನ ಜಯದೇವ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ವಿಭಾಗ ಸಹ ಮಂಜೂರು ಮಾಡಲಾಗಿದ್ದು, ಇಬ್ಬರು ವೈದ್ಯರನ್ನು ಸಹ ನೇಮಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಇದು ಮೊದಲ ವಿಭಾಗವಾಗಿದ್ದು, ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ನೆರವಾಗಲಿದೆ. ನೂತನ ಕಟ್ಟಡ ನಿರ್ಮಾಣ ನಂತರ ಹಾಸಿಗೆ ಸಾಮಥ್ರ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಬಗ್ಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಪಷ್ಟನೆ ನೀಡಿದರು.
150 ಹಾಸಿಗೆಯ ಇಂದಿರಾಗಾಂಧಿ ಮಕ್ಕಳ ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹೆಲ್ತ್ ಅಲೈಡ್ ಸೈನ್ಸ್ ಕಾಲೇಜು ನಿರ್ಮಾಣಕ್ಕೆ 10 ಎಕರೆ ಭೂಮಿ ಮತ್ತು 120 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪನೆಗೆ 25 ಎಕರೆ ಭೂಮಿ ನೀಡಲು ಗುಲಬರ್ಗಾ ವಿ.ವಿ. ಒಪ್ಪಿಗೆ ಸೂಚಿಸಿದ್ದು, ಇದರಿಂದ ವಿವಿ. ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿ ಪಡೆಯಲು ತುಂಬಾ ಅನುಕೂಲವಾಗಲಿದೆ ಎಂದರು.
1.30 ಲಕ್ಷ ಜನರಿಗೆ ಯುವ ನಿಧಿ ಹಣ: ರಾಜ್ಯದಾದ್ಯಂತ 1.62 ಲಕ್ಷ ಜನ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಲು ಹೆಸರು ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹ 1.30 ಲಕ್ಷ ಜನರಿಗೆ ಮಾಸಿಕ 1,500 ಮತ್ತು 3,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ. ಉಳಿದವರ ಅರ್ಜಿ ಅಪೂರ್ಣವಾಗಿದ್ದು, ಪ್ರತಿ ಮಾಹೆ 25ನೇ ತಾರೀಖಿನೊಳಗೆ ಉದ್ಯೋಗ ಪಡೆಯದಿರುವ ಬಗ್ಗೆ ದೃಢೀಕರಣ ನೀಡುವುದು ಕಡ್ಡಾಯವಾಗಿರುವುದರಿಂದ ಅದನ್ನು ಅಭ್ಯರ್ಥಿಗಳು ಸಲ್ಲಿಸಿದಲ್ಲಿ ಬಾಕಿ ಅರ್ಜಿ ಇತ್ಯರ್ಥಪಡಿಸಲಾಗುವುದು ಎಂದರು.
ಐ.ಟಿ.ಐ ಕಾಲೇಜು ಪುನರ್ ನವೀಕರಣ: ಕಲಬುರಗಿ ಪುರುಷರ ಐ.ಟಿ.ಐ ಕಾಲೇಜು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು. ಆಯವ್ಯಯದಲ್ಲಿ ಘೋಷಣೆಯಂತೆ ಮೊದಲನೇ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ, ಬಳ್ಳಾರಿ, ವಿಜಯಪುರ, ರಾಯಚೂರು ಸೇರಿ 6 ಕಾಲೇಜು ನವೀಕರಿಸಲಾಗುವುದು ಎಂದರು.
ನೌಕರಿಗೆ ದುಡ್ಡು ಕೇಳಿದರೆ ದೂರು ಕೊಡಿ: ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ನೌಕರಿ ಕೊಡಿಸುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಂಸ್ಥೆ ಗಮನಕ್ಕೆ ಬಂದ ಕೂಡಲೆ ಪೆÇಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಪೆÇಲೀಸ್ ಇಲಾಖೆ ರಾಜಶೇಖರ್ ಮತ್ತು ಸಂತೋಷ ಎಂಬುವವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ನೇಮಕಾತಿ ಕುರಿತಂತೆ ಸುಳ್ಳು ಸುದ್ದಿಗೆ ಯಾರು ಕಿವಿಗೊಡಬಾರದು. ಯಾರಾದರು ಹಣ ಕೇಳಿದರೆ ಪೆÇಲೀಸ್ ಠಾಣೆಗೆ ದೂರು ನೀಡುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಸಿ.ರವೀಂದ್ರನಾಥ, ಹಣಕಾಸು ಸಲಹೆಗಾರ ಅವಿನಾಶ, ಸಮನ್ವಯಾಧಿಕಾರಿ ಸಂತೋಷ ಇದ್ದರು.