ನಿರುದ್ಯೋಗ ಬಿಕ್ಕಟ್ಟು ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ
ವಿಜಯಪುರ,ಆ.13:ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಭಾರತದಲ್ಲಿ ಯುವ ಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿವೈಓ ಯುವಜನ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಅವರು ಮಾತನಾಡಿ, ನಿರುದ್ಯೋಗಿ ಯುವಜನರ ನೋವನ್ನು ನಿವಾರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಉದ್ಯೋಗವು ಮೂಲಭೂತ ಹಕ್ಕು ಎಂದು ನಾವು ನಂಬುತ್ತೇವೆ. ಪ್ರತಿಯೊಬ್ಬ ನಾಗರಿಕರಿಗೂ ಗೌರವಾನ್ವಿತ ಜೀವನೋಪಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸೆÉಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಅಒIಇ)ಯ ಇತ್ತೀಚಿನ ವರದಿಯ ಪ್ರಕಾರ ಜೂನ್ 2024ರಲ್ಲಿ ನಮ್ಮ ದೇಶದ ನಿರುದ್ಯೋಗ ದರವು ಶೇಕಡಾ 9.2ಕ್ಕೆ ಏರಿದೆ. ಇದು ಮೇ 2024ರಲ್ಲಿದ್ದ ಶೇಕಡಾ 7ಕ್ಕಿಂತ ಆಘಾತಕಾರಿಯಾದ ಏರಿಕೆಯಾಗಿದೆ. ಅನೇಕ ಯುವಜನರು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ದೇಶದಾದ್ಯಂತ ಅನಿವಾರ್ಯವಾಗಿ ಅಲೆದಾಡುತ್ತಿದ್ದಾರೆ. ಬಹುದೊಡ್ಡ ಭಾಗದ ಯುವಜನರು ಉತ್ತಮವಾದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಹುಡುಕಾಟದಲ್ಲಿ ತಮ್ಮ ತಾಯ್ನೆಲ, ಬಂಧು ಬಳಗ ಮತ್ತು ಪ್ರೀತಿಪಾತ್ರರನ್ನು ಬಿಟ್ಟು ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ವಲಸೆ ಕಾರ್ಮಿಕರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿದ್ರಾಮ ಹಿರೇಮಠ ಅವರು ಮಾತನಾಡಿ, ಹತ್ತಾರು ವರ್ಷಗಳ ಸತತ ಪ್ರಯತ್ನಗಳ ನಂತರವೂ ಯು.ಪಿ.ಎಸ್.ಸಿ. ಮತ್ತು ರಾಜ್ಯ ಸೇವಾ ಆಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ನೀಡುವ ಸರ್ಕಾರಿ ಉದ್ಯೋಗವನ್ನು ಪಡೆಯಲಾಗದೆ ಹತಾಶರಾಗುತ್ತಿದ್ದಾರೆ. ಈ ನಿರುದ್ಯೋಗದ ಬಿಕ್ಕಟ್ಟು ನಮ್ಮ ಯುವಜನರ ಮಾನಸಿಕ ಆರೋಗ್ಯದ ಮೇಲೂ ಭಾರಿ ದುಷ್ಪರಿಣಾಮವನ್ನು ಉಂಟು ಮಾಡುತ್ತಿದೆ. ಪ್ರಪಂಚದಲ್ಲೇ ಅತ್ಯಧಿಕ ಸಂಖ್ಯೆಯ ಯುವಜನರನ್ನು ಹೊಂದಿರುವ ನಮ್ಮ ದೇಶದಲ್ಲಿಂದು ಅವರ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಳ್ಳಲಾಗುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿಮಾಡಿಕೊಳ್ಳುತ್ತಿಲ್ಲ. ಖಾಯಂ ಸ್ವರೂಪದ ಕೆಲಸಗಳಿಗೂ ಗುತ್ತಿಗೆ ಆಧಾರದಲ್ಲಿ ನೇಮಕಾತಿಗಳು ನಡೆಯುತ್ತಿವೆ. ಹೊಸ ಉದ್ಯೋಗಗಳ ಸೃಷ್ಟಿಯ ಮಾತಂತೂ ದೂರವೇ ಉಳಿದಿದೆ. ಇದರಿಂದ ಅಪಾರ ಪ್ರಮಾಣದ ಉದ್ಯೋಗಾಕಾಂಕ್ಷಿ ಯುವಜನತೆ ಆಕ್ರೋಶಗೊಂಡಿದ್ದಾರೆ. ಆದ್ದರಿಂದ ಈ ನಿರುದ್ಯೋಗಿ ಯುವಜನರ ಹಕ್ಕೊತ್ತಾಯಗಳನ್ನು ಕೂಡಲೇ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಉದ್ಯೋಗಾಕಾಂಕ್ಷಿಗಳಾದ ಜಟ್ಟೆಪ್ಪ, ನಿಂಗಮ್ಮ ಸೇರಿದಂತೆ ಹ¯ವಾರು ಜನರು ಭಾಗವಹಿಸಿದ್ದರು.