ವಿಜೃಂಬಣೆಯಿಂದ ಜರುಗಿದ ಶ್ರೀ ಮಹಾಲಕ್ಷ್ಮೀದೇವಿ ಜಾತ್ರೋತ್ಸವ
ತಾಳಿಕೋಟೆ:ಆ.13:ಪಟ್ಟಣದ ಶ್ರೀ ಗಣೇಶನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಮಹಾಲಕ್ಷ್ಮೀದೇವಿಯ ಪ್ರಥಮ ವರ್ಷದ ಜಾತ್ರೋತ್ಸವವು ಬಡಾವಣೆಯ ಹಾಗೂ ಸುತ್ತಮುತ್ತಲಿನ ಭಕ್ತರೊಂದಿಗೆ ಇತ್ತೀಚಗೆ ಭಕ್ತಿಭಾವದೊಂದಿಗೆ ಜರುಗಿತು.
ಶ್ರೀ ಮಹಾಲಕ್ಷ್ಮೀದೇವಸ್ಥಾನ ಸೇವಾ ಸಮಿತಿಯ ನೇತೃತ್ವದಲ್ಲಿ ಜರುಗಿದ ಈ ಜಾತ್ರೋತ್ಸವದಲ್ಲಿ ಶ್ರೀ ದೇವಿಯ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಜರುಗಿತ್ತಲ್ಲದೇ ನಂತರ ಸುಮಂಗಲೆಯರ ಕುಂಭಕಳಸದೊಂದಿಗೆ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.
ನಂತರ ಶ್ರೀಮಂದಿರದಲ್ಲಿ ಜರುಗಿದ ಸ್ತ್ರೀಸೂಕ್ತ ಹೋಮ ಹವನವನ್ನು ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರ ಸಂಗಡಿಗರಾದ ರವಿ ಜೋಶಿ, ಅಶೋಕ ಜೋಶಿ, ದೀಪಕ ಜೋಶಿ, ಗೀರಿಶ ಜೋಶಿ, ವಿಶ್ವನಾಥ ನಿಂಬರಗಿ ಮೊದಲಾದವರು ನಡೆಸಿಕೊಟ್ಟರು.
ನಂತರ 101 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತ್ತಲ್ಲದೇ ಕಳೆದ ದಿ.6 ರಿಂದ 5 ದಿನಗಳ ವರೆಗೆ ಸಾಗಿಬಂದ ಶ್ರೀ ಮಹಾಲಕ್ಷ್ಮೀದೇವಿಯ ಪ್ರವಚನವು ಮಹಾಮಂಗಲಗೊಂಡಿತು. ಈ ಪ್ರವಚನವನ್ನು ವೇ.ಬಸಯ್ಯಸ್ವಾಮಿ ಯಾಳವಾರ ಅವರು ನಡೆಸಿಕೊಟ್ಟರು.
ಈ ಉತ್ಸವದಲ್ಲಿ ಪಾಲ್ಗೊಂಡ ಸಮಸ್ತ ಭಕ್ತಾಧಿಗಳು ಮಹಾಪ್ರಸಾದ ಸೇವಿಸಿ ಪುನಿತರಾದರು.
ನೇತೃತ್ವ ವಹಿಸಿದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸೇವಾ ಸಮಿತಿಯ ಆಡಳಿತ ಮಂಡಳಿಯ ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.