ಬೀದರ-ಬೆಂಗಳೂರು ವಿಮಾನಯಾನ ಪುನರಾರಂಭಿಸಿ : ಬಿ.ಜಿ.ಶೆಟಕಾರ
ಬೀದರ:ಆ.13: ಬೀದರ ಜಿಲ್ಲೆ ಇದೊಂದು ಐತಿಹಾಸಿಕ ಜಿಲ್ಲೆ. ಜಿಲ್ಲೆಯು ದಿನೇ ದಿನೇ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಸೆಳೆಯುತ್ತಿದೆ. ಇಂತಹ ಐತಿಹಾಸಿಕ ಬೀದರನಲ್ಲಿ 2020ರ ಫೆ. 7ರಂದು ಉಡಾನ್ ಯೋಜನೆಯಡಿಯಲ್ಲಿ ವಿಮಾನಯಾನ ಆರಂಭವಾಯಿತು. ಡಿ. 2023ರಿಂದ ಸ್ಥತಿಗತೊಂಡು ಈಗ ಮುಚ್ಚುವ ಸ್ಥಿತಿಗೆ ಬಂದು ತಲುಪಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದನ್ನು ಪುನರ್ ಆರಂಭ ಮಾಡುವ ಇಚ್ಛಾಶಕ್ತಿ ತೋರಬೇಕು. ಜಿಲ್ಲೆಗೆ ಬಂದ ವಿಮಾನಯಾನದ ಅವಕಾಶ ಕಳೆದುಕೊಳ್ಳಬಾರದು ಎಂದು ಬೀದರ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಜಿ.ಶೆಟಕಾರ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಯಾಣಿಕರ ಕೊರತೆಯಿಂದ ವಿಮಾನಯಾನ ಸ್ಥಗಿತಗೊಂಡಿದೆ ಎಂಬುದು ಸುಳ್ಳು. ಈ ಹಿಂದೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ ಹೆಚ್ಚಿನ ಆಸನವುಳ್ಳ ವಿಮಾನಸೇವೆ ಕೂಡ ಒದಗಿಸಲಾಗಿತ್ತು ಎಂಬುದು ನಂಬಲಾರ್ಹ ಸಂಗತಿ. ವಿಮಾನ ಸಂಸ್ಥೆ ನಷ್ಟಕ್ಕೆ ಮೂಲ ಕಾರಣ ಅಸಮಂಜಸ ಹೋಗಿ ಬರುವ ಸಮಯ. ಆ ಸಮಯ ಬದಲಾವಣೆ ಮಾಡಬೇಕೆಂದು ಶೆಟಕಾರ ತಿಳಿಸಿದರು.
ಈಗಾಗಲೇ ಬೀದರ ಏರ್‍ಪೋರ್ಟ್‍ನಲ್ಲಿರುವ ಸಿಬ್ಬಂದಿಗಳಿಗೆ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ವರ್ಗಾವಣೆಗೊಂಡ 60 ಜನ ಸಿಬ್ಬಂದಿಗಳಿಗೆ ಪುನಃ ಇಲ್ಲಿಗೆ ನಿಯೋಜನೆ ಮಾಡಬೇಕಾದರೆ ಕಷ್ಟಕರ ಕೆಲಸ. ಆದ್ದರಿಂದ ಯಾವುದೇ ಕಾರಣಕ್ಕೂ ಬೀದರ ವಿಮಾನಯಾನ ಕೈತಪ್ಪಿ ಹೋಗಬಾರದು. ವಿಮಾನ ಹಾರಾಟದ ಸಮಯ ಬೆಳಿಗ್ಗೆ ಹೋಗುವುದು ಮತ್ತು ಸಾಯಂಕಾಲ ಬರುವುದು ಈ ರೀತಿ ಬದಲಾವಣೆ ಮಾಡಬೇಕೆಂದು ಶೆಟಕಾರ ಆಗ್ರಹಿಸಿದರು.
ಬೀದರ ವಿಮಾನಯಾನ ಸೇವೆಗೆ ಐಎಟಿಎ ಸಂಸ್ಥೆಯಿಂದ ಐಕ್ಯೂ ಕೋಡ್ ಲಭಿಸಿದೆ. ಈ ಕೋಡ್ ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಕೂಡಾ ಹೌದು. ಬೀದರನಿಂದ ಮುಂಬೈಗೆ ವಿಮಾನಯಾನ ಆರಂಭ ಮಾಡಬೇಕು. ಹೀಗಾದಾಗ ಇಲ್ಲಿರುವ ಇಂಜಿನಿಯರ್, ವ್ಯಾಪಾರೋದ್ಯಮಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಹಾಗೂ ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನುಕೂಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿ ಸಂಸ್ಥೆಗೆ ಲಾಭದಾಯಕವಾಗುತ್ತದೆ. ಚೇಂಬರ್ ಆಫ್ ಕಾಮರ್ಸ್ ಮೊದಲಿನಿಂದಲೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದೆ. ಬೀದರ ಜಿಲ್ಲೆಗೆ ಒದಗಿಬಂದ ವಿಮಾನಯಾನದ ಅವಕಾಶ ಯಾವುದೇ ಕಾರಣಕ್ಕೂ ಕಳೆದುಕೊಳ್ಳದಂತೆ ಅಗತ್ಯ ಕ್ರಮ ಕೈಗೊಂಡು ಬೀದರ ಜನರ ಬವಣೆ ನೀಗಿಸಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ, ಸಹಕಾರ್ಯದರ್ಶಿ ರಾಜಶೇಖರ ಮಿಟಕಾರಿ, ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಸ್ವಾಮಿ ಹೆಡಗಾಪೂರ, ವೈಜಿನಾಥ ಪಾಟೀಲ ಇದ್ದರು.