ಒಳ್ಳೆಯ ಮನುಷ್ಯನಾಗಲು ಓದಿನ ಅಗತ್ಯವಿದೆ : ಡಾ.ಶಿವಾಜಿ ಮೇತ್ರೆ
ಬಸವಕಲ್ಯಾಣ:ಆ.13: ಶಿಕ್ಷಣ ಒಳ್ಳೆಯ ಮನುಷ್ಯನನ್ನಾಗಿಸುತ್ತದೆ. ಓದುವುದು ಎಂದರೆ ಜ್ಞಾನ ಪಡೆಯುವ ದಾರಿಯಾಗಿದೆ. ಸಮಾಜದ ಒಳಿತಿಗಾಗಿ ಬಳಕೆಯಾಗಿರುವುದನ್ನೇ ಜ್ಞಾನವೆನ್ನುತಾರೆ ಎಂದು ಕಲಬುರ್ಗಿಯ ಎನ್.ವಿ. ಕಾಲೇಜು ಪ್ರಾಧ್ಯಾಪಕ ಡಾ. ಶಿವಾಜಿ ಮೇತ್ರೆ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಓದುವ ಬಗೆಗಳು: ಒಂದು ಚಿಂತನೆ’ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯ ಕೃತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಸಮಾಜವನ್ನು ರೂಪಿಸುವ ಶಕ್ತಿ ಪಡೆದಿವೆ ಎಂದರು.
ಇಡೀ ಬದುಕು ವ್ಯವಹಾರವಲ್ಲ. ಬದುಕಿನಲ್ಲಿ ಎಷ್ಟೇ ನಷ್ಟವಾದರೂ ಅದನ್ನು ಎದುರಿಸುವ, ಭರಿಸುವ ದಾರಿಯು ಜ್ಞಾನ ಪರಂಪರೆಯಲ್ಲಿ ಅಡಗಿದೆ. ಮಾನವನಾಗುವ ಗುಣಗಳನ್ನು ಬಿತ್ತುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ. ಎಲ್ಲವನ್ನು ಪ್ರಶ್ನಿಸುವ ಸಾಮಥ್ರ್ಯ, ಹಲವು ಅರ್ಥಗಳನ್ನು ಕಂಡುಕೊಳ್ಳುವ ಪ್ರಮೆಯು ಓದಿನಲ್ಲಿದೆ. ಪ್ರತಿ ವಿಷಯದ ಮೂಲ ಅರಿಯಲು ದೊಡ್ಡ ಲೇಖಕರ ಕೃತಿ ಓದುವ ಅಗತ್ಯವಿದೆ. ಸಾಹಿತ್ಯದಿಂದ ವಿವೇಕವನ್ನು , ವಿಜ್ಞಾನದಿಂದ ಪರೀಕ್ಷಣೆಯ ಗುಣವನ್ನು ಬೆಳೆಯುತ್ತದೆ. ಭಾವಕೇಂದ್ರಿತವಾದ ಸಾಹಿತ್ಯ ಮತ್ತು ವಾಸ್ತವ ಕೇಂದ್ರೀತ ವಿಜ್ಞಾನ ಎರಡು ಮುಖ್ಯ ಎಂದರು.
ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಓದುವುದೆಂದರೆ ನಮ್ಮ ಅರಿವಿನ ಹರವು, ತಿಳುವಳಿಕೆಯ ಹಾಗೂ ಪ್ರಜ್ಞೆಯ ವಿಸ್ತಾರವೆಂದರ್ಥ. ಪ್ರತಿ ಓದು ಹೊಸ ಜಗತ್ತಿನ ಹಾಗೂ ಹೊಸ ಅನುಭವಲೋಕದ ಪಯಣವಾಗಿದೆ. ಸಿನಿಮಾ, ಸಾಹಿತ್ಯ ಕೃತಿ, ಕಲಾಕೃತಿ ಮತ್ತು ಸಮಾಜವನ್ನು ಪಠ್ಯವಾಗಿ ಅನುಸಂಧಾನ ಮಾಡಿದಾಗ ಅವುಗಳ ಸಾಂಸ್ಕøತಿಕ ಚಹೆರೆಗಳು ಕಾಣುತ್ತವೆ.
ಒಂದು ನಿರ್ದಿಷ್ಟ ಲೋಕದೃಷ್ಠಿ ರೂಪಿಸುವ, ನೀತಿ-ಅನೀತಿಗಳ ಸೀಮೆಯನ್ನು ತಿಳಿಸುವ, ಸೃಷ್ಟಿಯ ಅಗಮ್ಯ ಮತ್ತು ನಿಗೂಢತೆಗಳ ಅರಿವು ಗಂಭೀರ ಓದಿನಿಂದ ಸಾಧ್ಯ. ಆರ್ಥಿಕ ಸ್ವರೂಪದ ಬಗೆಗೆ, ಉತ್ಪಾದನಾ ಚಟುವಟಿಕೆಗಳ ಭೂಮಿಕೆಯ ಬಗೆಗೆ, ಸಾಮಾಜಿಕ, ರಾಜಕೀಯ ವಲಯದ ಪ್ರಜ್ಞೆ ಪ್ರಭಾವವನ್ನು ಅರುಹಿಸುವ ಶಕ್ತಿ ಓದಿಗಿದೆ.
ಒಂದು ಕೃತಿಯ ಬಹುಮುಖತ್ವವನ್ನು ಗ್ರಹಿಸುವ ಪ್ರಕ್ರಿಯೆ ಓದುವುದರಿಂದ ಆಗುತ್ತದೆ. ತೆರೆದ ಪಠ್ಯಗಳನ್ನು ಮುಕ್ತವಾದ ಮತ್ತು ನಿಕಟ ಓದಿನಿಂದ ಹೊಸ ಅರ್ಥಗಳನ್ನು ಕಂಡುಕೊಳ್ಳಬಹುದು ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಅಶೋಕರೆಡ್ಡಿ ಗದಲೆಗಾಂವ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪೂರೆ, ಪ್ರವೀಣ ಬಿರಾದಾರ, ನೀಲಮ್ಮ ಮೇತ್ರೆ, ಸಚಿನ ಬಿಡವೆ, ಸೌಮ್ಯಾ ಕರಿಗೌಡ, ರೋಶನ್ ಬಿ, ಗುರುದೇವಿ ಕಿಚಡೆ, ಪ್ರಭಾಕರ ನೌಗಿರೆ, ಬಸವರಾಜ ಗುಂಗೆ, ಸುಧೀರ ಗೋದೆ, ಪವನ ಪಾಟೀಲ, ಜಗದೇವಿ ಜವಳಗೆ ಮೊದಲಾದವರಿದ್ದರು.
ಚನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.