ಉಸಿರಿರುವವರೆಗೆ ಜನಸೇವೆಯೇ ನನ್ನ ಮಂತ್ರ : ಡಾ. ಎಂ.ಜಿ. ಮೂಳೆ
ಬಸವಕಲ್ಯಾಣ: ಆ.13:ಕೊನೆ ಉಸಿರು ಇರುವವರೆಗೆ ಕ್ಷೇತ್ರದ ಜನತೆಯ ಸೇವೆ ಮಾಡುವುದೇ ನನ್ನ ಮಂತ್ರ, ಸೇವೆಗಾಗಿ ಬಾಳುವುದೇ ನನ್ನ ಸಿದ್ದಾಂತ ಎಂದು ಡಾ. ಎಂ. ಜಿ. ಮೂಳೆ ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಿಂದ ಗೌರವ ಸತ್ಕಾರ ಸ್ವೀಕರಿಸಿದ ವಿಧಾನ ಪರಿಷತ್ ನೂತನ ಶಾಸಕರಾದ ಡಾ. ಎಂ. ಜಿ. ಮೂಳೆ ರವರು ಮಾತನಾಡಿ ತ್ಯಾಗ ಮತ್ತು ಸೇವೆ ನಮ್ಮ ದೇಶದ ಆದರ್ಶವೂ ಹೌದು, ಹಾರಕೂಡ ಶ್ರೀಮಠದ ಜೀವನಾಡಿಯೂ ಹೌದು, ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರವರ ಆಶೀರ್ವಾದದಿಂದ ಇಂದು ನಾನು ವಿಧಾನ ಪರಿಷತ್ ಶಾಸಕನಾಗಿದ್ದೇನೆ. ಪೂಜ್ಯರ ಆದರ್ಶ ಪರಂಪರೆಯಲ್ಲಿ ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ಇಡೀ ನಮ್ಮ ಕುಟುಂಬದವರೆಲ್ಲರೂ ಹಾರಕೂಡ ಶ್ರೀಮಠಕ್ಕೆ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತೇವೆ.
ಈ ನಾಡಿಗೆ ಇಂತಹ ಯತಿಗಳು ದೊರೆತಿರುವುದು ನಮ್ಮೆಲ್ಲರ ಭಾಗ್ಯ ಎಂದು ಭಾವುಕರಾಗಿ ನುಡಿದರು.
ಮುಂದುವರೆದು ಇಷ್ಟೊಂದು ಅಪಾರ ಭಕ್ತ ಸಮೂಹದಲ್ಲಿ ನನ್ನನ್ನು ಸತ್ಕರಿಸಿ ಆಶೀರ್ವದಿಸಿರುವುದು ತುಂಬಾ ಖುಷಿ ತಂದುದಲ್ಲದೆ ಸ್ಪೂರ್ತಿಯೂ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಬೀದರ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ. ಹಿರೇಮಠ, ನಿವೃತ್ತ ಶಿಕ್ಷಕರಾದ ಪಂಚಾಕ್ಷರಿ ಹಿರೇಮಠ, ಮುಖಂಡರಾದ ರವಿ ಕೋಳಕೂರ, ಮಲ್ಲಿನಾಥ ಹಿರೇಮಠ ಹಾರಕೂಡ, ಅರ್ಜುನ ಬಿರಾದರ ಸರಜವಳಗಾ, ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.
ಅಂಬರಾಯ ಉಗಾಜಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಚಿತ್ರ : ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಪ್ರಥಮ ಬಾರಿಗೆ ಹಾರಕೂಡ ಶ್ರೀಮಠಕ್ಕೆ ಆಗಮಿಸಿದ ಡಾ. ಎಂ. ಜಿ. ಮೂಳೆ ಅವರನ್ನು ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು.
ಬಿ.ಕೆ. ಹಿರೇಮಠ, ಪಂಚಾಕ್ಷರಿ ಹಿರೇಮಠ, ಮುಖಂಡರಾದ ರವಿ ಕೋಳಕೂರ, ಮಲ್ಲಿನಾಥ ಹಿರೇಮಠ ಹಾರಕೂಡ, ಅಂಬರಾಯ ಉಗಾಜಿ, ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಅಲಗುಡೆ,ಅರ್ಜುನ ಬಿರಾದರ ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.