ಬಾಂಗ್ಲಾ ದೇಶದ ಪರಿಸ್ಥಿತಿ ವಕೀಲರ ಸಂಘದಿಂದ ಖಂಡನೆ
ಬೀದರ:ಆ.13:ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಗಾಗಿ ನಡೆದ ಚಳವಳಿಯ ಸಂದರ್ಭದಲ್ಲಿ ಹಿಂದೂ, ಬೌದ್ಧ ಮತ್ತು ಅಲ್ಲಿನ ಇತರೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಘಟನೆಗಳ ಬಗ್ಗೆ ಜಿಲ್ಲಾ ವಕೀಲರ ಸಂಘವು ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅನ್ಯ ಅಲ್ಪಸಂಖ್ಯಾತ ಸಮುದಾಯಗಳ ಉದ್ದೇಶಿತ ಹತ್ಯೆ, ಲೂಟಿ, ಅಗ್ನಿಸ್ಪರ್ಶ, ಮಹಿಳೆಯರ ವಿರುದ್ಧದ ಘೋರ ಅಪರಾಧಗಳು ಮತ್ತು ಮಂದಿರಗಳಂತಹ ಪೂಜಾ ಸ್ಥಳಗಳ ಮೇಲಿನ ದಾಳಿಯ ಕ್ರೂರತನವನ್ನು ಸಹಿಸಲಾಗುವುದಿಲ್ಲ ಮತ್ತು ವಕೀಲರ ಸಂಘ ಇದನ್ನು ಬಲವಾಗಿ ಖಂಡಿಸುತ್ತದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ತಕ್ಷಣವೇ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಇಂತಹ ಘಟನೆಗಳನ್ನು ನಿಲ್ಲಿಸಿ, ಸಂತ್ರಸ್ತರ ಪ್ರಾಣ, ಆಸ್ತಿ, ಗೌರವ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅಪೇಕ್ಷಿಸಲಾಗಿದೆ. ಈ ಗಂಭೀರ ಸಮಯದಲ್ಲಿ, ವಿಶ್ವ ಸಮುದಾಯ ಮತ್ತು ಭಾರತದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಚಿತ್ರಹಿಂಸೆಗೆ ಬಲಿಯಾದ ಹಿಂದೂ, ಬೌದ್ಧ ಇತ್ಯಾದಿ ಸಮುದಾಯಗಳ ಜೊತೆಗೆ ಒಂದಾಗಿ ನಿಲ್ಲಬೇಕೆಂದು ವಿನಂತಿ.
ಬಾಂಗ್ಲಾದೇಶದ ಈ ಪರಿಸ್ಥಿತಿಯಲ್ಲಿ ನೆರೆಯ ಮಿತ್ರ ರಾಷ್ಟ್ರವಾಗಿ ಯೋಗ್ಯ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿರುವ ಭಾರತ ಸರ್ಕಾರವು ಬಾಂಗ್ಲಾದೇಶದಲ್ಲಿರುವ ಹಿಂದೂಗಳು, ಬೌದ್ಧರು ಇತ್ಯಾದಿ ಜನರ ಸುರಕ್ಷತೆಯನ್ನು ಕಾಪಾಡಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಜಿಲ್ಲಾ ವಕೀಲರ ಸಂಘ ಬೀದರ್ ಆಗ್ರಹಿಸಿದೆ.