ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ: ಶಾಸಕ ಪಾಟೀಲ್
ಅಫಜಲಪುರ:ಆ.13: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ರಾಜ್ಯದಲ್ಲಿ ಮಾದರಿಯಾಗಿಸಲು ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಅಂದಾಜು 87 ಲಕ್ಷ ರೂಪಾಯಿ ವೆಚ್ಚದ ಆಡಳಿತ ಕಚೇರಿ ಉದ್ಘಾಟನೆ ಮತ್ತು ಆರ್.ಐ.ಡಿ.ಎಫ್-29 ಯೋಜನೆ ಅಡಿಯಲ್ಲಿ ಅಂದಾಜು 150 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಶೌಚಾಲಯ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿಯಲ್ಲಿರುವ ಅಫಜಲಪುರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ವಿಭಾಗೀಯ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ರೈತ ಭವನ ನಿರ್ಮಿಸಲು ಕ್ರಮಕೈಗೊಳ್ಳಬೇಕು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜೊತೆಗೆ ಮಧ್ಯವರ್ತಿಗಳಿಂದ ಹಾನಿಗೊಳಗಾಗುತ್ತಿದ್ದಾರೆ. ವರ್ತಕರು ಮೂಲತಃ ಕೃಷಿಕರಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡಿ ವ್ಯಾಪಾರ ಮಾಡಬೇಕು. ದೇಶವು ತಾಂತ್ರಿಕವಾಗಿ ಮುಂದುವರೆದಿದ್ದು, ಬೆರಳೆಣಿಕೆ ಜನರಿಗೆ ಮಾತ್ರ ಉದ್ಯೋಗ ದೊರೆಯಬಹುದು. ಆದರೆ ಕೃಷಿಯಿಂದ ಎಲ್ಲ ವರ್ಗದ ಜನರಿಗೆ ಕೆಲಸ ಸಿಗಲು ಸಾಧ್ಯವಾಗುತ್ತದೆ. ಸರಕಾರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ಮಾಡಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಕೃಷಿ ಇಲಾಖೆ ವಿಭಾಗೀಯ ಹೆಚ್ಚುವರಿ ನಿರ್ದೇಶಕಿ ಎಂ.ಎಸ್.ರಾಜಶ್ರೀ, ತಹಸೀಲ್ದಾರ ಸಂಜೀವಕುಮಾರ ದಾಸರ, ಎಪಿಎಂಸಿ ಇಇ ಎಸ್.ಎಸ್.ಜಹಾಗಿರದಾರ, ಎಪಿಎಂಸಿ ಎಇಇ ಪಿ.ವಿ.ವಾಘಮೋರೆ, ಎಪಿಎಂಸಿ ಸಹಾಯಕ ನಿರ್ದೇಶಕಿ ಸವಿತಾ ನಾಯಕ, ಎಪಿಎಂಸಿ ಕಾರ್ಯದರ್ಶಿ ಸಂತೋಷ ಬುಡಗೆ, ಪಪ್ಪು ಪಟೇಲ್, ಜೆ.ಎಂ.ಕೊರಬು, ಪ್ರಕಾಶ್ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಚಂದು ದೇಸಾಯಿ, ಶ್ರೀಕಾಂತ ಮ್ಯಾಳೇಶಿ, ಸಂತೋಷ ದಾಮಾ, ಶರಣು ನೂಲಾ, ಮಲ್ಲಪ್ಪ ಗುಣಾರಿ, ಶ್ರೀಕಾಂತ ಕಲಕೇರಿ, ಚನ್ನಬಸಯ್ಯ ಹಿರೇಮಠ, ಸೂರ್ಯಕಾಂತ ಹಿರೇಮಠ, ಧರೇಶ ಅಂಜುಟಗಿ ಇತರರಿದ್ದರು.