ರೇಷನ್ ವಿತರಿಸುವಲ್ಲಿ ವಿಫಲವಾದ ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದುಪಡಿಸಲು ಆಗ್ರಹ
ಅಫಜಲಪುರ:ಆ.13: ಪಡಿತರ ಚೀಟಿದಾರರಿಗೆ ರೇಷನ್ ವಿತರಿಸುವಲ್ಲಿ ವಿಫಲವಾದ ನ್ಯಾಯಬೆಲೆ ಅಂಗಡಿಯ ಪರವಾನಿಗೆಯನ್ನು ಕೂಡಲೇ ರದ್ದು ಪಡಿಸಬೇಕೆಂದು ಸಾಮಾಜಿಕ ಹೋರಾಟಗಾರ ಶ್ರೀಮಂತ ಬಿರಾದಾರ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನಾಕಾರರು ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬಡವರಿಗೆ ನೀಡುತ್ತಿರುವ ರೇಷನ್ ವಿತರಣೆಯನ್ನು ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಪೂರೈಸುವಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ವಿಫಲರಾಗಿದ್ದಾರೆ. ಅಫಜಲಪುರ ಪಟ್ಟಣದ ನಿಂಬಿ ತೋಟದಲ್ಲಿರುವ ವಾರ್ಡ್ ನಂ. 18, 19, 20, 21 ರ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿ ಸಂಖ್ಯೆ 5 ರ ಮಾಲೀಕರು ರೇಷನ್ ವಿತರಿಸುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಅನೇಕ ಬಾರಿ ತಮಗೆ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ತಮಗೆ ಅರ್ಜಿಯನ್ನು ಸಲ್ಲಿಸಿದರೂ ಕೂಡ ತಾವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಈ ಕೂಡಲೇ ನ್ಯಾಯಬೆಲೆ ಅಂಗಡಿ ಸಂಖ್ಯೆ 5ರ ಪರವಾನಿಗೆಯನ್ನು ರದ್ದುಪಡಿಸಿ ಬೇರೆಯವರಿಗೆ ಪರವಾನಿಗೆ ನೀಡಬೇಕು ಎಂದು ಮನವಿ ಮಾಡಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಂಬಣ್ಣ ಚಾಂದಕವಟೆ, ಮಳೆಪ್ಪ ಚಿಂಚೋಳಿ, ಭಾಗಣ್ಣ ಕಲ್ಲೂರ, ಹಣಮಂತ್ ಕಣ್ಣಿ, ಬಸವರಾಜ ಮಲಗಾಣ, ಐಯ್ಯಾಳಿ ಜಾಲಹಳ್ಳಿ, ಶ್ರೀಮಂತ ಮೂಲಿಮನಿ, ಸೈಫನಸಾಬ ಆಲಮೇಲ ಸೇರಿದಂತೆ ವಾರ್ಡಿನ ಮಹಿಳೆಯರು ಹಾಜರಿದ್ದರು.