ಬೆಂಬಲ ಬೆಲೆ ಖರೀದಿಗೆ ಆಗ್ರಹ
ಲಕ್ಷ್ಮೇಶ್ವರ,ಆ.13: ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿದ್ದು ಕೊಯ್ಲಿಗೆ ಬಂದಿರುವ ಹೆಸರು ಬೆಳೆಯನ್ನು ರೈತರು ಜಮೀನುಗಳಲ್ಲಿಯೇ ಯಂತ್ರಗಳ ಮುಖಾಂತರ ಒಕ್ಕಲು ಮಾಡಿ ಎಲ್ಲೆಂದರಲ್ಲಿ ಹೆಸರುಕಾಳುಗಳನ್ನು ಒಣಗಿಸುತ್ತಿರುವ ದೃಶ್ಯ ಕಾಣುತ್ತಿದೆ.
ತಾಲೂಕಿನಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಜಿಟಿಜಿಟ ಮಳೆ ರೈತರನ್ನು ಆತಂಕಕ್ಕೆ ಈಡು ಮಾಡಿತ್ತು ಈಗ ಮಳೆ ಕಡಿಮೆಯಾಗಿ ಬಿಸಿಲು ಬಿದ್ದಿರುವುದರಿಂದ ರೈತರು ಜಮೀನುಗಳಲ್ಲಿನ ಹೆಸರು ಬೆಳೆಯನ್ನು ಒಕ್ಕಲು ಮಾಡಿ ನಿಟ್ಟುಸಿರು ಬಿಡುವಂತಾಗಿದೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಸುಮಾರು 9000 ಹೆಕ್ಟರ್ ಜಮೀನಿನಲ್ಲಿ ಹೆಸರು ಬೆಳೆ ಬಿತ್ತನೆಯಾಗಿದ್ದು ಮುಂಚಿತವಾಗಿಯೇ ಬಿತ್ತಿದ್ದ ಹೆಸರು ಬೆಳೆ ಮಳೆಗೆ ಸಿಲುಕಿ ಹಾನಿ ಗೀಡಾಗಿರುವ ರೈತರು ಮರಗುತ್ತಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಸಂಪೂರ್ಣ ಹೆಸರು ರೈತರ ಕೈ ಸೇರಲಿದ್ದು ಮುಕ್ತ ಮಾರುಕಟ್ಟೆಯಲ್ಲಿ ರೈತರು ಮಾರುವ ಬದಲು ಕೇಂದ್ರ ಸರ್ಕಾರದ ಘೋಷಣೆಯಂತೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು.
ಈ ಕುರಿತು ಗೊಜನೂರು ಗ್ರಾಮದ ರೈತ ಮುಖಂಡ ಚೆನ್ನಪ್ಪ ಷಣ್ಮುಖಿಯವರು ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಬೇಕು ರೈತರು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.